ಆಲೆಟ್ಟಿ ಗ್ರಾಮದ ಕುಡೆಕಲ್ಲು ಎಂಬಲ್ಲಿ ವಿದ್ಯುತ್ ಲೈನಿಗೆ ಮರದ ಕೊಂಬೆ ತಾಗಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಾಡಿಗೆ ತಗುಲಿದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ನಂದಿಸಿದರು. 
ಜಿಲ್ಲೆ

ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಕಾಡಿಗೆ ಬೆಂಕಿ

ಸುಳ್ಯ: ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ಎಂಬಲ್ಲಿ ವಿದ್ಯುತ್ ಲೈನಿಗೆ ಮರದ ಕೊಂಬೆ ತಾಗಿದಾಗ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾಡಿಗೆ ಬೆಂಕಿ ತಗುಲಿದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಆಲೆಟ್ಟಿ ಮುಖ್ಯ ರಸ್ತೆಯಿಂದ ಕುಡೆಕಲ್ಲು ಕುಂಚಡ್ಕ ಕಡೆಗೆ ಸಂಚರಿಸುವ ಮಧ್ಯೆ ಕುಡೆಕಲ್ಲಿನ ಎತ್ತರದ ಪ್ರದೇಶದಲ್ಲಿ ವಿದ್ಯುತ್ ಲೈನಿಗೆ ಮರದ ಕೊಂಬೆ ತಗುಲಿದ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿ ತಳಭಾಗದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿತು. ಸ್ಥಳೀಯ ಪಂಚಾಯಿತಿ ಸದಸ್ಯರಾದ ಚಂದ್ರಕಾಂತ ನಾರ್ಕೋಡು ಮತ್ತು ಸತ್ಯಪ್ರಸಾದ್ ಗಬ್ಬಲ್ಕಜೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದರು.

ಸ್ಥಳಕ್ಕಾಗಮಿಸಿದ ಸುಳ್ಯ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಸೇರಿ ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರು. ಪರಿಸರದ ಸ್ಥಳೀಯರ ಎಚ್ಚರಿಕೆಯಿಂದಾಗಿ ದೊಡ್ಡಮಟ್ಟದ ಅನಾಹುತ ತಪ್ಪಿದಂತಾಗಿದೆ.