ಹುಣಸೂರು: ಆದಿವಾಸಿ ಗಿರಿಜನರ ಸಾಮೂಹಿಕ ಹಕ್ಕು, ನೆಲಸುಗಳ ಹಕ್ಕು ಸೇರಿದಂತೆ ವಿವಿಧ ಹಕ್ಕುಗಳನ್ನು ಜಿಲ್ಲಾಡಳಿತ ಮಾನ್ಯ ಮಾಡಿ ಹಕ್ಕುಪತ್ರ ನೀಡದಿದ್ದರೆ ಸೆಪ್ಟೆಂಬರ್‌ನಿಂದ ಕಾಡು ಪ್ರವೇಶ ಚಳವಳಿ ಹಮ್ಮಿಕೊಳ್ಳಲು ಗಿರಿಜನರು ಸರ್ವಾನುಮತದ ನಿರ್ಣಯ ಕೈಗೊಂಡರು.
ಶುಕ್ರವಾರ ತಾಲೂಕಿನ ಚಂದನಗಿರಿ ಹಾಡಿಯಲ್ಲಿ ಬುಡಕಟ್ಟು ಕೃಷಿಕರ ಸಂಘ ಮತ್ತು ಆದಿವಾಸಿ ಮಹಿಳಾ ಸಂಘಗಳು ಜಂಟಿಯಾಗಿ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಮಾತನಾಡಿದ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಅರಣ್ಯ ಹಕ್ಕಿನ ಅರ್ಜಿಗಳನ್ನು ಜಿಲ್ಲಾ ಅರಣ್ಯ ಹಕ್ಕು ಸಮಿತಿಯು ನಮ್ಮ ವೈಯಕ್ತಿಕ ಅರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಹಕ್ಕು, ನೆಲಸುಗಳ ಹಕ್ಕು, ಕಿರುಸಂಪನ್ಮೂಲಗಳ ಮೇಲಿನ ಹಕ್ಕು ಮಾನ್ಯ ಮಾಡಿ ಕೂಡಲೇ ಹಕ್ಕು ಪತ್ರ ನೀಡಬೇಕು. ನಿರ್ಲಕ್ಷಿಸಿದರೆ ಕಾಡು ಪ್ರವೇಶ ಚಳವಳಿಯನ್ನು ಹಾಡಿ ಅರಣ್ಯ ಹಕ್ಕು ಸಮಿತಿಗಳು ಹಾಗೂ ಗ್ರಾಮಸಭೆಗಳು ಮುಂದಿನ ಸೆಪ್ಟೆಂಬರ್‌ನಿಂದ ಎಲ್ಲ ಹಾಡಿಗಳಲ್ಲಿ ಅವರವರ ಪರಂಪರೆಯ ಜಮ್ಮಾ ಕಾಡಿಗೆ ಪ್ರವೇಶ ಚಳವಳಿ ಹಮ್ಮಿಕೊಳ್ಳಲಿವೆ. ಈ ಕುರಿತು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹೆಮ್ಮಿಗೆ ಹರ್ಷ ಮಾತನಾಡಿ, ಜೇನುಕುರುಬ ಜಾತಿ ಪತ್ರವನ್ನು ಅಲೆಮಾರಿ ಸಮುದಾಯದ ತಮಿಳು ಮೂಲದ ಚಿಕ್ಕಹುಣಸೂರು ಅಂಬೇಡ್ಕರ್ ಕಾಲನಿ ಜನರು, ಕಟ್ಟೆಮಳಲವಾಡಿ ಕಾಲನಿ, ಬನ್ನಿಕುಪ್ಪೆ, ತೊಂಡಾಳು ಹಾಗೂ ಮಂಗಳೂರು ಮಾಳದಲ್ಲಿ ಪಡೆದಿರುವುದನ್ನು ಕೂಡಲೇ ಜಿಲ್ಲಾಧಿಕಾರಿ ರದ್ದುಪಡಿಸಬೇಕು. ಈ ಕುರಿತು ರಾಜ್ಯ ನಾಗರಿಕ ಹಕ್ಕುಜಾರಿ ನಿರ್ದೇಶನಾಲಯ ಗಮನಹರಿಸಬೇಕು. ಅಲ್ಲದೆ ಹೆಮ್ಮಿಗೆ ಹಾಡಿಯ ರಸ್ತೆ, ವಿದ್ಯುತ್, ನೆರಳಕುಪ್ಪೆ ಬಿ ಹಾಡಿಯ ಕುಡಿವ ನೀರಿನ ಸಮಸ್ಯೆ ಕೂಡಲೇ ಸಂಬಂಧಿದವರು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಭರತವಾಡಿ ಲಕ್ಷ್ಮೀ ಮಾತನಾಡಿ, ತರಿಕಲ್ ರಂಗಯ್ಯನ ಕೊಪ್ಪಲ್ ಹಾಡಿಯಲ್ಲಿ ಆದಿವಾಸಿ ಜನರ ಸಾಗುವಳಿ ಭೂಮಿಯಲ್ಲಿ ಇತರರು ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತೆರವುಗೊಳಿಸಬೇಕು. ನೇರಳಕುಪ್ಪೆ ಬಿ ಹಾಡಿಯ ಜನರು ಮಾಡುತ್ತಿರುವ ಭೂಮಿಗೆ ಬೇರೆಯವರು ಪಡೆದಿರುವ ಸಾಗುವಳಿ ರದ್ದುಗೊಳಿಸಿ ಆದಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಪೌತಿಖಾತೆಗೆ ಆದಿವಾಸಿಗಳು ತಕರಾರು ಅರ್ಜಿ ಸಲ್ಲಿಸಿರುವುದರಿಂದ ತಹಸೀಲ್ದಾರ್ ಈ ಭೂಮಿಗೆ ಪೌತಿಖಾತೆ ಮಾಡುವುದನ್ನು ತಡೆಹಿಡಿಯಬೇಕು. ಪೌಷ್ಟಿಕ ಆಹಾರದಲ್ಲಿ ನೀಡುವ ಎಣ್ಣೆ ಕಳಪೆ ಗುಣಮಟ್ಟದ್ದಾಗಿರುವುದರಿಂದ ಕೂಡಲೇ ಗುಣಮಟ್ಟದ ಎಣ್ಣೆ ನೀಡಬೇಕು ಎಂದು ಒತ್ತಾಯಿಸಿದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಹೈಕೋರ್ಟ್ ತೀರ್ಪಿನ ಅನ್ವಯ ಅರಣ್ಯದಿಂದ ಹೊರದೂಡಲ್ಪಟ್ಟ 3418 ಕುಟುಂಬಗಳಿಗೂ ಪುನರ್ವಸತಿ ನೀಡಬೇಕು. ಆದೇಶ ಜಾರಿಯಲ್ಲಿ 10 ವರ್ಷ ಸರ್ಕಾರ ತಡ ಮಾಡಿರುವುದಕ್ಕೆ ಆದಿವಾಸಿಗಳ ಕ್ಷಮೆ ಕೇಳಬೇಕು. ಆದಿವಾಸಿಗಳ ಸೌಹಾರ್ದ ಸಹಕಾರ ಸಂಘಕ್ಕೆ ಬಡ್ಡಿರಹಿತ ಸಾಲನೀಡಿ ಕೃಷಿಗೆ, ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಆದಿವಾಸಿ ಮುಖಂಡರಾದ ಸಾಕಯ್ಯ, ಚಂದನಗಿರಿ ಪುಟ್ಟಯ್ಯ, ಪುಟ್ಟಮಾದಯ್ಯ, ಶೀಲಾ, ಸಣ್ಣಮ್ಮ, ತೆಕ್ಲ ಹಾಡಿ ಶಿವಣ್ಣ, ಬಿಲ್ಲನಹೊಸಹಳ್ಳಿ ಶಾಂತಿ, ಕಾನೂನು ಸೇವಾ ಆಯೋಗದ ಮಾಜಿ ಸದಸ್ಯ ವಿಠಲ್ ನಾಣಾಚ್ಚಿ ಮತ್ತು ಚಂದನಗಿರಿ ಹಾಡಿಜನರು ಪಾಲ್ಗೊಂಡಿದ್ದರು.