ಜಿಲ್ಲೆ

ಅರಣ್ಯ ಅತಿಕ್ರಮಣ ಸಕ್ರಮಾತಿಗೆ ಆಗ್ರಹಿಸಿ ಶಾಸಕರ ಮನೆ ಚಲೋ

Uttara Kannada - Subash Hegde

ಕಾರವಾರ: ಅರಣ್ಯ ಅತಿಕ್ರಮಣ ಸಕ್ರಮಾತಿಯ ಬಗ್ಗೆ ಮುಂಬರುವ ವಿಧಾನಸಭೆ ಅಽವೇಶನದಲ್ಲಿ ಮಾತನಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್)ಸದಸ್ಯರು ಶಾಸಕ ಸತೀಶ ಸೈಲ್ ಅವರಲ್ಲಿ ಮನವಿ ಮಾಡಿದರು.

ಸಂಘಟನೆಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಶಾಸಕರ ಮನೆ ಚಲೋ ಕಾರ್ಯಕ್ರಮದ ಭಾಗವಾಗಿ ಸೋಮವಾರ ಮನವಿ ಸಲ್ಲಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ, ಅರಣ್ಯ ಹಕ್ಕು ಕಾಯ್ದೆ -2006 ಜಾರಿಗೆ ಬಂದು 15 ವರ್ಷ ಕಳೆದಿದೆ. ಜಿಲ್ಲೆಯಲ್ಲಿ 80 ಸಾವಿರಕ್ಕೂ ಅಧಿಕ ಅತಿಕ್ರಮಣದಾರರು ಸಕ್ರಮಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದುವರೆಗೂ ಹಕ್ಕು ಪತ್ರ ಕೊಟ್ಟಿಲ್ಲ. ಇತ್ತೀಚೆಗೆ ಅಧಿಕಾರಿಗಳು ಅರ್ಜಿಗಳ ಮರು ಪರಿಶೀಲನೆಗೆ ಮುಂದಾಗಿದ್ದು, 75 ವರ್ಷಗಳ ದಾಖಲೆ ನೀಡುವಂತೆ ನೋಟಿಸ್ ನೀಡುತ್ತಿದ್ದಾರೆ. ಬ್ರಿಟಿಷರ ಕಾಲದ ದಾಖಲೆಯನ್ನು ಜನರು ಎಲ್ಲಿಂದ ತರಲು ಸಾಧ್ಯ ಎಂಬುದು ನಮ್ಮ ಪ್ರಶ್ನೆಯಾಗಿದೆ. ಇನ್ನು ಹಕ್ಕು ನೀಡಲು 75 ವರ್ಷಗಳ ಸಾಂದರ್ಭಿಕ ದಾಖಲೆ ಮಾತ್ರ ಇದ್ದರೆ ಸಾಕು ಎಂಬ ಒಂದು ಅಭಿಪ್ರಾಯವೂ ಇದೆ. ಈ ಬಗ್ಗೆ ಅಽಕಾರಿಗಳಲ್ಲೇ ಗೊಂದಲವಿದೆ.

ಅರಣ್ಯ ಕಂದಾಯ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಕೆಲ ಅತಿಕ್ರಮಣ ಜಮೀನಿನ ಜಿಪಿಎಸ್ ಸರ್ವೇ ಕಾರ್ಯವೂ ಅಸಮರ್ಪಕವಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆದು ಒಂದು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕಿದೆ.

ಲೋಕಸಭೆಯಲ್ಲೂ ಈ ವಿಷಯ ಚರ್ಚೆಯಾಗಬೇಕು ಎಂದರು.

ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಅಂಕೋಲಾ ತಾಲೂಕು ಕಾರ್ಯದರ್ಶಿ ಸಂತೋಷ ನಾಯ್ಕ, ಪ್ರಮುಖರಾದ ಸಂತೋಷ ಜರಡಿ, ಉಲ್ಲಾಸ ನಾಯ್ಕ, ಪ್ರೇಮಾ ಉಳಗೇಕರ್, ಮೀನಾಕ್ಷಿ ಗೌಡ, ಗೌರಿ ಗೌಡ, ಶಿವರಾಮ ಪಟಗಾರ ಸುದ್ದಿಗೋಷ್ಠಿಯಲ್ಲಿದ್ದರು.