ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಹಸಿರು ಹಬ್ಬ’ ಗಿಡ ನೆಡುವ ಮಾಸಾಚರಣೆ ಕಾರ್ಯಕ್ರಮ ಪ್ರಯುಕ್ತ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಹಾಗೂ ಪರಿಸರ ಪ್ರೇಮಿ ಚ.ನಾ.ಅಶೋಕ್ ಗಿಡ ನೆಟ್ಟು ನೀರೆರೆದರು. ನೇತ್ರಾವತಿ ಜಗದೀಶ್, ಹೂ.ವೀ.ಸಿದ್ದೇಶ್, ಅನಿತಾ, ದೇವರಾಜೇಗೌಡ, ಪುಷ್ಪ, ಗಿಡ್ಡಮ್ಮ ಇತರರು ಇದ್ದರು. 
ಜಿಲ್ಲೆ

ಮಾನವನ ದುರಾಸೆಯಿಂದ ಅರಣ್ಯ ನಾಶ

ರವಿಕುಮಾರ್ ಪಿ. ಕೆ

ಚನ್ನರಾಯಪಟ್ಟಣ: ಮಾನವನ ಅತಿಯಾದ ದುರಾಸೆಯಿಂದ ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವುದು ಕಳವಳಕಾರಿ ಎಂದು ಬರಹಗಾರ ಹಾಗೂ ತಾಲೂಕಿನ ಐತಿಹ್ಯ ಸಂಗ್ರಹಕಾರ ಕರೀಂ ಉಲ್ಲಾ ಖಾನ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಭೂಮಿ ಉಳಿಸಿ ಆಂದೋಲನ ಸಮಿತಿ, ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಪೇಟೆಯ ಸಹಯೋಗದಲ್ಲಿ ‘ಹಸಿರು ಹಬ್ಬ’ ಗಿಡ ನೆಡುವ ಮಾಸಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಆವರಣದಲ್ಲಿ ಗಿಡ ನೆಟ್ಟು ನೀರೆರೆದು ಮಾತನಾಡಿದರು.

ಅರಣ್ಯ ನಾಶದಿಂದ ಇಂದು ಭಾರತವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಪರಿಸರ ಅಸಮತೋಲನ, ತಾಪಮಾನ ಏರಿಕೆ, ಮಳೆಯ ಕೊರತೆ, ಬರ ಪರಿಸ್ಥಿತಿ ಕಂಡುಬರುತ್ತಿದೆ. ಕಾಡು ನಾಶವಾದರೆ, ಮರಗಳನ್ನು ಕಡಿದು ಹಾಕಿದರೆ ಪರಿಸ್ಥಿತಿ ಏನಾಗಲಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇರುವ ಅನಾಹುತಗಳೇ ಹೇಳುತ್ತವೆ. ವನ್ಯಜೀವಿಗಳು ನಾಡಿಗೆ ಬರುವುದು, ಮನುಷ್ಯರ ಮೇಲೆ ದಾಳಿ, ಜೀವ ಹಾನಿ, ಬೆಳೆಹಾನಿಯಂತಹ ಪ್ರಕರಣಗಳು, ನೀರಿನ ಕೊರತೆಯಿಂದ ಜನ ಎದುರಿಸುತ್ತಿರುವ ಹಾಹಾಕಾರ, ಬರದ ಸನ್ನಿವೇಶದ ಹಿಂದೆ ಅರಣ್ಯ ನಾಶದ ನಂಟು ಇದ್ದೇ ಇದೆ. ಮಾನವ ತಮ್ಮ ಬದುಕಿಗಾಗಿ ಪ್ರಾಕೃತಿಕ ಸಂಪನ್ಮೂಲವನ್ನು ನಿರಂತರವಾಗಿ ಬರಿದುಮಾಡುತ್ತಿದ್ದಾರೆ. ಆದರೆ ತನ್ನಂತೆಯೇ ಈ ಜಗತ್ತಿನಲ್ಲಿ ಇತರ ಪ್ರಾಣಿ- ಪಕ್ಷಿಗಳು, ಸಸ್ಯ ಸಂಕುಲಗಳು ಬದುಕುತ್ತಿವೆ ಎಂಬುದನ್ನು ನಿರ್ಲಕ್ಷಿಸುತ್ತಿದ್ದಾನೆ. ಇದರಿಂದ ಪ್ರಾಕೃತಿಕ ಅಸಮತೊಲನ ಉಂಟಾಗುತ್ತಿದೆ ಎಂದರು.

ಶಾಲೆಯ ಮುಖ್ಯಶಿಕ್ಷಕಿ ನೇತ್ರಾವತಿ ಮಾತನಾಡಿ, ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದರ ಜತೆಗೆ ಶಾಲಾ ಆವರಣದಲ್ಲಿ ಬಹುಪಯೋಗಿ ಸಸಿಗಳನ್ನು ಬೆಳೆಸಲು ರಾಜ್ಯ ಶಾಲಾ ಶಿಕ್ಷಣ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಸಸ್ಯ ಶ್ಯಾಮಲಾ ಕಾರ್ಯಕ್ರಮದಡಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎ.ಎಲ್.ನಾಗೇಶ್ ಪ್ಲಾಸ್ಟಿಕ್ ಬಳಕೆಯಿಂದ ಪ್ರಕೃತಿ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಪ್ರೇಮಿ ಚ.ನಾ.ಅಶೋಕ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಆರೋಗ್ಯ ಶಿಕ್ಷಣ ಅಧಿಕಾರಿ ಅನಿತಾ, ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎ.ಎಂ.ಜಯರಾಂ, ಜಗದೀಶ್, ಹೂ.ವೀ. ಸಿದ್ದೇಶ್, ಪುಷ್ಪ, ನಾಟಿ ವೈದ್ಯೆ ಗಿಡ್ಡಮ್ಮ, ಅಭಿ, ದೇವರಾಜೇಗೌಡ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.