ಗಂಗಾವತಿ: ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೊಳಪಡುವ ಜನವಸತಿ ಪ್ರದೇಶದ ತಾಲೂಕಿನ ಚಿಕ್ಕರಾಂಪುರ ಮತ್ತು ಲಕ್ಷ್ಮೀಪುರದ 192.85 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ ಸುಪರ್ದಿಗೆ ಪಡೆಯಲು ಅಧಿಸೂಚನೆ ಹೊರಡಿಸಿದ್ದು, ತೆರವಿನ ತೂಗುಕತ್ತಿ ನೇತಾಡುತ್ತಿದೆ.
ಚಿಕ್ಕರಾಂಪುರ ಮತ್ತು ಲಕ್ಷ್ಮೀಪುರದ ಸ.ನಂ.112, 136, 31, 34 ಮತ್ತು 41ರ ಭೂಮಿಯನ್ನು ಮೀಸಲು ಅರಣ್ಯ ಪ್ರದೇಶವೆಂದು 1975ರಲ್ಲಿ ೋಷಿತವಾಗಿದ್ದರೂ, ಉದ್ದೇಶಿತ ಭೂಮಿಯಲ್ಲಿ ನಿರ್ವಸಿತರ ಅನುಕೂಲಕ್ಕಾಗಿ ಅಂದಿನಿಂದಲೂ ಜನವಸತಿ ಮತ್ತು ಬೇಸಾಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆನೆಗೊಂದಿ ಮತ್ತು ಮಲ್ಲಾಪುರ ಗ್ರಾಪಂ ವ್ಯಾಪ್ತಿಗೊಳಪಡುತ್ತಿದ್ದು, ಡಿಮ್ಯಾಂಡ್ ರಜಿಸ್ಟರ್ ಪ್ರಕಾರ 169ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಶೇ.70 ಭೂಮಿಯಲ್ಲಿ ಬೇಸಾಯವಿದ್ದು, ಹಲವು ವರ್ಷಗಳಿಂದಲೂ ಇಲ್ಲಿನ ರೈತರು ಉಪಜೀವನಕ್ಕಾಗಿಟ್ಟುಕೊಂಡಿದ್ದಾರೆ. 50ವರ್ಷಗಳ ನಂತರ ಮೀಸಲು ಅರಣ್ಯ ಪ್ರದೇಶ ದಾಖಲೆಗಳನ್ನು ಹೊರತೆಗೆದಿರುವ ಅರಣ್ಯ ಇಲಾಖೆ ನಡೆ ಅನುಮಾನಕ್ಕೀಡು ಮಾಡಿದ್ದು, ಜನರನ್ನು ಒಕ್ಕಲೆಬ್ಬಿಸುವ ಜನಪ್ರತಿನಿಧಿಗಳ ಹುನ್ನಾರದ ಬಗ್ಗೆ ಚರ್ಚೆ ಶುರುವಾಗಿದೆ.
ಅನುದಾನ ಬಳಕೆ: ಮೀಸಲು ಅರಣ್ಯ ಪ್ರದೇಶ 1975ರಲ್ಲಿ ೋಷಿತವಾಗಿದ್ದರೂ, ಉದ್ದೇಶಿತ ಭೂಮಿಯಲ್ಲಿ ಅಲ್ಲಿಂದ ಇಲ್ಲಿವರೆಗೂ ಬರೋಬ್ಬರಿ 500 ಕೋಟಿ ರೂ.ವರೆಗೆ ಅಭಿವೃದ್ಧಿ ಕಾಮಗಾರಿಗಳಾಗಿವೆ. ಸ.ಕಿ.ಪ್ರಾ.ಶಾಲೆ, ಅಂಗನವಾಡಿ ಕೇಂದ್ರ, ಮೇಲೆತ್ತರದ ಕುಡಿವ ನೀರು ಸಂಗ್ರಹ ಟ್ಯಾಂಕ್ 4ಕ್ಕೂ ಹೆಚ್ಚು ನೀರು ಸರಬರಾಜು ಘಟಕ, ಸಿಸಿ ರಸ್ತೆ, ವಿದ್ಯುತ್ ಕಂಬ, ಕುಡಿವ ನೀರಿನ ಪೈಪ್‌ಲೈನ್, 20ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನೀಡಲಾಗಿದೆ. 48 ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ದಾಖಲೆಗಳು ಸಿಕ್ಕಿವೆ. ಇಲ್ಲಿನ ನಿವಾಸಿಗಳಿಗೆ ವೋಟರ್, ಆಧಾರ್ ಕಾರ್ಡ್ ಸೇರಿ ಇತರ ದಾಖಲೆಗಳಿವೆ. ಗ್ರಾಪಂಯಿಂದ ವಾಸಸ್ಥಳ ಪ್ರಮಾಣ ಪತ್ರ ವಿತರಿಸಲಾಗಿದೆ. ಮೀಸಲು ಅರಣ್ಯ ಎಂದು ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದರೆ, ಇಷ್ಟೆಲ್ಲ ಅನುದಾನ ಬಳಕೆ ಮತ್ತು ದಾಖಲೆ ಪತ್ರ ನೀಡಿದ್ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಅಂಜನಾದ್ರಿ ಅಭಿವೃದ್ಧಿಗೆ ಅಡ್ಡಿ: ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟ ಚಿಕ್ಕರಾಂಪುರ ವ್ಯಾಪ್ತಿಯಲ್ಲಿದ್ದು, ಬೆಟ್ಟದ ಹಿಂಭಾಗದ ಬಹುತೇಕ ಪ್ರದೇಶ ಅರಣ್ಯ ಪ್ರದೇಶಕ್ಕೆ ಸೇರಿದ್ದಾಗಿದೆ. ಅಂಜನಾದ್ರಿ ಅಭಿವೃದ್ಧಿಗಾಗಿ ಸರ್ಕಾರ ವಶಪಡಿಸಿಕೊಳ್ಳಲೆತ್ನಿಸುತ್ತಿರುವ 62 ಎಕರೆ ಪ್ರದೇಶದಲ್ಲಿ ಶೇ.50 ಭೂಮಿ ಇದೇ ಪ್ರದೇಶದಲ್ಲಿ ಬರಲಿದೆ. ಪ್ರದಕ್ಷಿಣೆ ಪಥ, ಕೇಬಲ್ ಕಾರ್ ಸೇರಿ ಇತರ ಅಭಿವೃದ್ಧಿಗಳು ಉದ್ದೇಶಿತ ಭೂಮಿಯಲ್ಲಿ ಕೈಗೊಳ್ಳಲು ನಿರ್ಣಯಿಸಿದ್ದು, ಮೀಸಲು ಅರಣ್ಯ ನೆಪದಲ್ಲಿ ವಶಪಡಿಸಿಕೊಂಡರೇ ಅಭಿವೃದ್ಧಿಗೆ ಅಡ್ಡಿಯಾಗಲಿದೆ. ಭೂಮಿಗೆ ಚಿನ್ನದ ಬೆಲೆ ಬಂದಿರುವುದೇ ಅರಣ್ಯ ಇಲಾಖೆ ಹಳೇ ದಾಖಲೆ ತೆಗೆದು, ವಶಪಡಿಸಿಕೊಳ್ಳಲೆತ್ನಿಸುತ್ತಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬಂದಿದೆ. ಅರಣ್ಯ ಪ್ರದೇಶ ಡಿನೋಟಿಫಿಕೇಷನ್‌ಗೆ ಅವಕಾಶವಿದ್ದು, ಮೀಸಲು ಅರಣ್ಯ ಪ್ರದೇಶ ಯಾರಿಂದಲೂ ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆ ಬಿಟ್ಟರೇ ಬೇರೆ ದಾರಿಯಿಲ್ಲ.
ನೋಟಿಸ್ ಜಾರಿ, ಆತಂಕದಲ್ಲಿ ಜನತೆ: ಉದ್ದೇಶಿತ ಭೂಮಿ ವಶಕ್ಕಾಗಿ ಬಳ್ಳಾರಿಯ ಅರಣ್ಯ ಕ್ಷೇತ್ರ ನಿರ್ಧಾರಾಧಿಕಾರಿಗಳ ಕಚೇರಿ ಸೆ.15ರಂದು ಅಧಿಸೂಚನೆ ಹೊರಡಿಸಿದ್ದು, ಮುಂದಿನ ಕ್ರಮಕ್ಕಾಗಿ ಆನೆಗೊಂದಿ ಮತ್ತು ಮಲ್ಲಾಪುರ ಗ್ರಾಪಂಗೆ ವಹಿಸಲಾಗಿದೆ. ಅಧಿಸೂಚನೆ ಹೊರಡಿಸಿದ 90 ದಿನಗಳವರೆಗೂ ಸೂಕ್ತ ದಾಖಲೆಗಳೊಂದಿಗೆ ಬಳ್ಳಾರಿ ಕಚೇರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದರೂ, ಕಾನೂನಿನ ಮೊರೆ ಹೋಗಬೇಕಿದೆ. ಈಗಾಗಲೇ ಚಿಕ್ಕರಾಂಪುರದಲ್ಲಿ ಗ್ರಾಪಂಯಿಂದ ಅಭಿಪ್ರಾಯ ಸಂಗ್ರಹ ಸಭೆ ಆಯೋಜಿಸಿ, ಮುಂದಿನ ನಿರ್ಧಾರದ ಬಗ್ಗೆ ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸಿದೆ. ಯೋಜನೆ ಕೈಬಿಡದಿದ್ದರೆ ಹೋರಾಟಕ್ಕಿಳಿಯುವ ನಿರ್ಧಾರ ತೆಗೆದುಕೊಂಡಿದ್ದು, ಸಂಘರ್ಷ ತಾರಕ್ಕೇರುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಸಿಎಂ ಬಳಿ ನಿಯೋಗ ತೆರಳಲು ನಿರ್ಧರಿಸಲಾಗಿದೆ. ನೋಟಿಸ್ ಜಾರಿಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಹಾಲಿಗಳ ನಿರ್ಲಕ್ಷ್ಯ, ಮಾಜಿಗಳ ಆಸಕ್ತಿ: ಜನ ಮತ್ತು ರೈತರ ಪರ ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಸಂಸದ ರಾಜಶೇಖರ್ ಹಿಟ್ನಾಳ್ ನಿರ್ಲಕ್ಷ್ಯವಹಿಸಿದ್ದು, ಇದುವರೆಗೂ ಸ್ಪಂದಿಸಿಲ್ಲ. ಅಂಜನಾದ್ರಿ ಬೆಟ್ಟಕ್ಕೆ ಬೇಕಿರುವ ಭೂಮಿ ಇದೇ ಸರ್ವೇ ನಂಬರನಲ್ಲಿದ್ದು, ರೈತರು ಕೊಡದಿರುವುದೇ ಮೀಸಲು ಅರಣ್ಯ ಪ್ರದೇಶದ ಕ್ಯಾತೆ ತೆಗೆದಿದ್ದಾರೆ ಎಂಬ ಮಾತುಗಳು ಜನಜನಿತವಾಗುತ್ತಿದೆ. ಮಾಜಿ ಶಾಸಕ ಪರಣ್ಣ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ರಾಮಯ್ಯ, ರಾಜವಂಶಸ್ಥೆ ಲಲಿತಾರಾಣಿರಾಯಲು ಹೋರಾಟದ ಆಸಕ್ತಿವಹಿಸಿದ್ದು, ರಾಜಕೀಯ ಸಂಘರ್ಷ ವೇದಿಕೆಯಾಗಲಿದೆ.
ಮೀಸಲು ಅರಣ್ಯ ಪ್ರದೇಶ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಅರಣ್ಯ ಇಲಾಖೆ ಕ್ರಮ ಪ್ರಶ್ನಿಸುವಂತಿಲ್ಲ. ಉದ್ದೇಶಿತ ಭೂಮಿಯಲ್ಲಿ ಅನುದಾನ ಬಳಕೆಯಾಗಿದೆ ಎಂಬ ಕಾರಣಕ್ಕಾಗಿ ಮೀಸಲು ಅರಣ್ಯ ಪ್ರದೇಶ ಪ್ರಸ್ತಾಪ ಕೈಬಿಡುವಂತಿಲ್ಲ.
ಡಾ.ಸುರೇಶ ಇಟ್ನಾಳ್
ಡಿಸಿ, ಕೊಪ್ಪಳ
ಕಳೆದ 50ವರ್ಷಗಳಿಂದ ಉದ್ದೇಶಿತ ಭೂಮಿಯಲ್ಲಿ ವಾಸಿಸುತ್ತಿದ್ದು, ಸೌಲಭ್ಯಗಳನ್ನು ಪಡೆದುಕೊಂಡಿದ್ದೇವೆ. ಇದೇ ಬದುಕಿಗೆ ಆಧಾರವಾಗಿದ್ದು, ಏಕಾಏಕಿ ಮೀಸಲು ಅರಣ್ಯ ಪ್ರದೇಶವೆಂದು ಒಕ್ಕಲೆಬ್ಬಿಸಲೆತ್ನಿಸುವುದು ಸರಿಯಲ್ಲ.
ಈರಣ್ಣ ವಿಭೂತಿ
ಚಿಕ್ಕರಾಂಪುರ ನಿವಾಸಿ
ಚಿಕ್ಕರಾಂಪುರ ಮತ್ತು ಲಕ್ಷ್ಮೀಪುರ ಪ್ರದೇಶವನ್ನು ಮೀಸಲು ಅರಣ್ಯ ಎಂದು ಇಲ್ಲಿನ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಜನರೊಂದಿಗೆ ನಾವಿದ್ದು, ಶೀಘ್ರವೇ ನಿಯೋಗದೊಂದಿಗೆ ಸಿಎಂ ಭೇಟಿ ಮಾಡಲಾಗುವುದು.
ಪರಣ್ಣ ಮುನವಳ್ಳಿ
ಮಾಜಿ ಶಾಸಕ, ಗಂಗಾವತಿ