ಗುಂಡ್ಲುಪೇಟೆ: ಬಂಡೀಪುರ ಉದ್ಯಾನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಸುವ ಮೂಲಕ ಮುಂದಿನ ದಿನಗಳಲ್ಲಿ ಸಸ್ಯಾಹಾರಿ ವನ್ಯಪ್ರಾಣಿಗಳ ಮೇವಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೂ ಸಮರ್ಪಕ ಆಹಾರ ದೊರಕುವಂತೆ ಮಾಡಲು ಅರಣ್ಯ ಇಲಾಖೆ ಅರಣ್ಯದಲ್ಲಿ ಹಸಿರು ಮೇವಿಗೆ ಆದ್ಯತೆ ನೀಡಿದೆ. ಅರಣ್ಯಕ್ಕೆ ಮಾರಕವಾಗಿರುವ ಲಂಟಾನಾ ಹಾಗೂ ಹಿಪಥೋರಿಯಂ ಕಳೆಗಳು ಬೆಳೆಯುತ್ತಿರುವುದರಿಂದ ಅವು ಬೆಳೆದಿರುವ ಪ್ರದೇಶಗಳಲ್ಲಿ ಹುಲ್ಲು ಬೆಳೆಯುತ್ತಿಲ್ಲ. ಪರಿಣಾಮ ಸಸ್ಯಹಾರಿ ಪ್ರಾಣಿಗಳಿಗೆ ಮೇವಿನ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಪ್ರತಿ ವಲಯದಲ್ಲಿಯೂ ಐದಾರು ಹೆಕ್ಟೇರ್ ಪ್ರದೇಶದಲ್ಲಿ ಹುಲ್ಲುಗಾವಲು ನಿರ್ಮಿಸಲು ಮುಂದಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಬೆಳೆದಿರುವ ಕಳೆಗಳನ್ನು ಪ್ರತಿ ವರ್ಷವೂ ತೆರವು ಮಾಡುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ವ್ಯಾಪಕವಾಗಿ ಬೆಳೆಯುತ್ತಿವೆ. ಪಾರ್ಥೇನಿಯಂ, ಹಿಪಥೋರಿಯಂ, ಲಂಟಾನಾ ಮುಂತಾದ ಕಳೆಗಳನ್ನು ನಾಶಪಡಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗುತ್ತಿದೆ. ಅಲ್ಲದೇ ಸಸ್ಯಾಹಾರಿ ವನ್ಯಜೀವಿಗಳಿಗೆ ಮೇವಿನ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆಗಳನ್ನು ತೆರವುಗೊಳಿಸುವ ಮೂಲಕ ಬಯಲು ಪ್ರದೇಶಗಳಲ್ಲಿ ಹುಲ್ಲು ಬೆಳೆಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದೆ.
ಇದರ ನಡುವೆ ಏಳೆಂಟು ವರ್ಷಗಳ ಹಿಂದೆ ಬಿದಿರು ಹೂಬಿಟ್ಟು ನಾಶವಾಗಿರುವುದರಿಂದ ಆ ಪ್ರದೇಶಗಳಲ್ಲಿ ಅಲ್ಲಲ್ಲಿ ಮೆಳೆಗಳು ಮತ್ತೆ ಹುಟ್ಟಿ ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿ ಬಂಡೀಪುರ ಉದ್ಯಾನದಲ್ಲಿ ಇನ್ನಷ್ಟು ಬಿದಿರು ಬೆಳೆಸುವ ಕೆಲಸಕ್ಕೆ ಅರಣ್ಯ ಇಲಾಖೆ ಕ್ರಮಕೈಗೊಂಡಿದೆ. ಈಗಾಗಲೇ ಅರಣ್ಯ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ಭೂಮಿ ತೇವಗೊಂಡಿದ್ದು, ಅರಣ್ಯ ಇಲಾಖೆ ಬಿದಿರು ಬಿತ್ತನೆ ಕಾರ್ಯ ಕೈಗೆತ್ತಿಕೊಂಡಿದೆ. ಎಲ್ಲ ವಲಯಗಳ ವ್ಯಾಪ್ತಿಯಲ್ಲಿ ಬಿದಿರು ಬಿತ್ತನೆ ಬೀಜ ನೆಡುವ ಕಾರ್ಯ ಪ್ರಗತಿಯಲ್ಲಿದ್ದು ಈಗ ಬಿತ್ತನೆ ಮಾಡಿದರೆ ಮುಂದಿನ ದಿನಗಳಲ್ಲಿ ಮೊಳಕೆಯೊಡೆದು ಬೆಳೆಯಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಬಂಡೀಪುರದಲ್ಲಿ ಬಿದಿರು ನಾಶವಾಗಿದ್ದರಿಂದ ಆನೆಯಂತಹ ಬೃಹತ್ ವನ್ಯಜೀವಿಗಳಿಗೆ ಮೇವಿನ ಕೊರತೆಯಾಗಿತ್ತು. ಹಳ್ಳ ಹಾಗೂ ತಗ್ಗು ಪ್ರದೇಶಗಳಲ್ಲಿ ಅಲ್ಲಲ್ಲಿ ಬಿದಿರು ಮತ್ತೆ ಚಿಗುರುತ್ತಿದ್ದರೂ ಇನ್ನೂ ದೊಡ್ಡ ಪ್ರಮಾಣದಲ್ಲಿ ಬೆಳೆದಿಲ್ಲ. ಆದ್ದರಿಂದ ಬಿದಿರಿನ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ.
ಡಾ.ರಮೇಶ್ ಕುಮಾರ್ ನಿರ್ದೇಶಕ, ಬಂಡೀಪುರ ಹುಲಿ ಯೋಜನೆ