ಜಿಲ್ಲೆ

ಕಚ್ಚಾ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ

ಮೂಡಿಗೆರೆ: ಮುದ್ರೆಮನೆಯಿಂದ ಹೊಯ್ಸಳಲು ಗ್ರಾಮದ ಪರಿಶಿಷ್ಟ ಪಂಗಡದ ಬಡಾವಣೆಗೆ ಸಾಗುವ ಚಿನ್ನಿಗ ಗ್ರಾಮ ಪಂಚಾಯಿತಿಗೆ ಸೇರಿದ ಕಚ್ಚಾ ರಸ್ತೆಯನ್ನು 41ವರ್ಷದಿಂದ ಅಭಿವೃದ್ಧಿಪಡಿಸದಿರುವುದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು 15 ಕಿಮೀ ರಸ್ತೆಯಲ್ಲಿ ಸುತ್ತಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮುದ್ರೆಮನೆ ತಂಗುದಾಣದಿಂದ ಅರಣ್ಯ ಇಲಾಖೆಗೆ ಸೇರಿದ ಕಾಡಿನ ಮಧ್ಯೆ 1984ರಲ್ಲಿ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಆ ರಸ್ತೆಗೆ ಇದುವರೆಗೂ ಜಲ್ಲಿಕಲ್ಲು ಹಾಕಿಲ್ಲ. ಡಾಂಬರೀಕರಣ ಮಾಡಿಲ್ಲ. ಮಾರ್ಗದ ಮಧ್ಯೆ ಸುಂಡೆಕೆರೆ ಹಳ್ಳಕ್ಕೆ 1984ರಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ ಈಗ ರಸ್ತೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಹಿಂದೆ ಈ ರಸ್ತೆ ನಿರ್ಮಿಸುವಾಗ ಅರಣ್ಯ ಇಲಾಖೆ ಅವರು ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿದ್ದರು. ಈಗ ಆ ರಸ್ತೆಗೆ ಡಾಂಬರೀಕರಣ ಅಥವ ಕಾಂಕ್ರೀಟೀಕರಣ ನಡೆಸಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ.

ದುರ್ಗಮ ಅರಣ್ಯದ ಮಧ್ಯೆಯಿರುವ ಈ ಕಚ್ಚಾ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ಕಾಲ್ನಡಿಗೆಯಲ್ಲಿ ತಿರುಗಾಡುತ್ತಾರೆ. ವಾಹನಗಳು ಓಡಾಡುವಷ್ಟು ಅಗಲದ ರಸ್ತೆ ಇದ್ದರೂ ಗುಂಡಿ ಹೆಚ್ಚಾಗಿರುವ ಕಾರಣ ವಾಹನಗಳು ಪಲ್ಟಿ ಹೊಡೆಯುವ ಸಾಧ್ಯತೆಯಿದೆ ಎಂದು ವಾಹನಗಳು ಸಂಚರಿಸುತ್ತಿಲ್ಲ. ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಸಾಗಿ ಮುದ್ರೆಮನೆ ತಂಗುದಾಣ ತಲುಪಿ ಅಲ್ಲಿಂದ ಬಸ್ ಹತ್ತಿ ಪಟ್ಟಣದ ಶಾಲೆ, ಕಾಲೇಜಿಗೆ ತಲುಪಬೇಕಾಗಿದೆ. ರೋಗಿಗಳು, ಹಿರಿಯ ನಾಗರಿಕರು ಬಾಡಿಗೆ ವಾಹನದಲ್ಲಿ ದುಬಾರಿ ಬೆಲೆ ನೀಡಿ 15 ಕಿಮೀ ದೂರದ ಜನ್ನಾಪುರ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ.