ಯರಗಟ್ಟಿ: ಸಾರ್ವಜನಿಕರು ಅರಣ್ಯ ಇಲಾಖೆಗೆ ಸಹಕಾರ ನೀಡಿದರೆ ಪ್ರತಿ ಗ್ರಾಮದಲ್ಲಿ ಉದ್ಯಾನ ನಿರ್ಮಾಣ ಮಾಡುವ ಜತೆಗೆ ಶುದ್ಧ ಪರಿಸರ ಕಾಪಾಡಬಹುದು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದ್ದಾರೆ.
ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಅಶ್ವತ್ಥ ವನಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಮನೆಗೊಂದು ಮರ ಊರಿಗೊಂದು ವನ ಎಂಬ ಮಾತು ಗ್ರಾಮೀಣ ಭಾಗದಲ್ಲಿ ಸಾಕಾರವಾಗಿದೆ. ಮುಗಳಿಹಾಳ ಮತ್ತು ಸುತ್ತಲಿನ ಭಾಗದಲ್ಲಿ ನರೇಗಾ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಿಸಲಾದ ನೆಡುತೋಪುಗಳು ಸೌಂದರ್ಯ ಇಮ್ಮಡಿಗೊಳಿಸಿವೆ. ಅಶ್ವತ್ಥ ವನದಲ್ಲಿ ನೀರಿನ ಅನುಕೂಲಕ್ಕಾಗಿ ಒಂದು ಬೋರ್‌ವೆಲ್ ಕೊರೆಯಿಸಲಾಗುವುದು ಎಂದರು.
ಎಸಿಎಫ್ ಶ್ರೀಕಾಂತ ಕಣದಳ್ಳಿ ಮಾತನಾಡಿ, ಮುಗಳಿಹಾಳ ಮತ್ತು ಸೊಪ್ಪಡ್ಲದಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ಇದೆ. ಶಾಸಕರು ಸರ್ಕಾರದಿಂದ ವಿಶೇಷ ಅನುದಾನ ಒದಗಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಾಮಾಜಿಕ ಅರಣ್ಯ ಇಲಾಖೆಯಿಂದ ಸಿದ್ಧಪಡಿಸಿದ ನುಡಿಚಿತ್ರ ಸಿಡಿಯನ್ನು ಆನಂದ ಮಾಮನಿ ಬಿಡುಗಡೆಗೊಳಿಸಿದರು. ಅಜಿತಕುಮಾರ ದೇಸಾಯಿ, ಬಸಯ್ಯ ಹಿರೇಮಠ, ಈರಣ್ಣ ಚಂದರಗಿ, ಶಂಕರ ಅಂತರಗಟ್ಟಿ, ಸೋಮಶೇಖರ ಪಾವಟೆ ಇತರರು ಇದ್ದರು.
ಮುನವಳ್ಳಿ: ಬಿಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಸಮೀಪದ ಭಂಡಾರಹಳ್ಳಿ ಗ್ರಾಮದ ಚಂದ್ರಮಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಸಹಕಾರಿ ಸಂಘಗಳಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು. ಸಂಘದ ಅಧ್ಯಕ್ಷ ಭುಜಂಗರಾವ್ ನಿಕ್ಕಂ, ನಿರ್ದೇಶಕರಾದ ಕೃಷ್ಣಾ ಪಾಟೀಲ, ಪುಂಡಲೀಕ ಮೂಲಂಗಿ, ಭೀಮಪ್ಪ ಮುನವಳ್ಳಿ, ಹಾಲಪ್ಪ ಅರ್ಟಗಲ್ಲ, ಕರೆಪ್ಪ ಬೆಳ್ಳಿವರಿ, ವಿಠ್ಠಲ ಅರಬಾವಿ, ಮುತ್ತೆಪ್ಪ ಮೇಟಿ, ಉದಯ ನಾಯ್ಕರ, ಅರ್ಜುನ ನಾಯ್ಕರ, ವಿಲಾಸ ನಲಗೆ, ಮೌನೇಶ ಬಡಿಗೇರ, ಮುಖ್ಯ ಕಾರ್ಯನಿರ್ವಾಹಕ ಸಂತೋಷ ಘೋರ್ಪಡೆ ಇತರರು ಇದ್ದರು.