ಮಂಡ್ಯ: ಅರಣ್ಯ ಇಲಾಖೆಯ ವಲಯ ಕಚೇರಿಯಲ್ಲಿ ಮಾಸಿಕ ಹೆಚ್ಚುವರಿ ಮತ್ತು ಕ್ಷೇಮಾಭಿವೃದ್ಧಿ ಸೌಲಭ್ಯದಲ್ಲಿ ತಾರತಮ್ಯ ಮಾಡಿರುವುದನ್ನು ಖಂಡಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣದ ಅರಣ್ಯಇಲಾಖೆಯ ವಲಯ ಕಚೇರಿಯಲ್ಲಿ 12 ಜನ ನೌಕರರು 1996ರ ಕೆಲಸಕ್ಕೆ ಸೇರಿದ್ದು, ಇವರು ಮಾಸಿಕ ಹೆಚ್ಚುವರಿ ಹಾಗೂ ಕ್ಷೇಮಾಭಿವೃದ್ಧಿ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದರು. ಆದರೆ, ಆರು ಜನರಿಗೆ ಮಾತ್ರ ಶಿಫಾರಸು ಮಾಡಿದ್ದರಿಂದ ಅವರಿಗೆ ಮಾತ್ರ ಸೌಲಭ್ಯ ದೊರಕಿದೆ. ಅಧಿಕಾರಿಗಳು ಕೆಲವರಿಗೆ ಮಾತ್ರ ಸವಲತ್ತು ಕಲ್ಪಿಸಿ ಹಲವು ನೌಕರರಿಗೆ ತಾರತಮ್ಯ ಮಾಡಿದ್ದು, ಮಾಹಿತಿ ಹಕ್ಕು ಅಧಿನಿಯಮದಡಿ ಇದರ ಮಾಹಿತಿ ಕೋರಿದ್ದರೂ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವೆಂಕಟಗಿರಿಯಯ್ಯ, ನಾಗರಾಜು, ಸುಕನ್ಯಾ, ತುಳಸಿಕುಮಾರ್, ರಮೇಶ್, ನಂಜುಂಡಸ್ವಾಮಿ, ನಾಗೇಶ್, ಸರೋಜಮ್ಮ, ವೆಂಕಟೇಶ್, ಮಳವಳ್ಳಿ ನಾಗರಾಜು ಇತರರಿದ್ದರು.