ಜಿಲ್ಲೆ

ಅರಣ್ಯ ಇಲಾಖೆ ಸ್ವಚ್ಛತಾ ಜಾಗೃತಿ : ಧರ್ಮಸ್ಥಳ ಪಾದಯಾತ್ರಿಗಳಿಗೆ ನೀರು, ನೆರಳಿನ ಆಶ್ರಯ ಎಸಿಎಫ್ ವಿನೂತನ ಚಿಂತನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಮಹಾಶಿವರಾತ್ರಿಯ ಅಂಗವಾಗಿ ಭಕ್ತರು ಬಿಸಿಲೆ ಘಾಟಿ ಅರಣ್ಯ ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಶಿವರಾತ್ರಿ ಬಳಿಕ ಯಾತ್ರಾರ್ಥಿಗಳು ಕಾಲ್ನಡಿಗೆಯಲ್ಲೇ ವಾಪಸ್ ಬರುತ್ತಾರೆ. ಪಾದಯಾತ್ರೆ ವೇಳೆ ಯಾತ್ರಾರ್ಥಿಗಳು ಅರಣ್ಯ ಪ್ರದೇಶದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸವನ್ನು ಎಸೆಯದಂತೆ ಮಂಗಳೂರು ಅರಣ್ಯ ವಿಭಾಗದ ಆಶ್ರಯದಲ್ಲಿ ಸುಬ್ರಹ್ಮಣ್ಯ ಉಪವಿಭಾಗ ಸುಳ್ಯ ವತಿಯಿಂದ ಜಾಗೃತಿ ಮೂಡಿಸುವ ಬೃಹತ್ ಅಭಿಯಾನ ಕೈಗೊಳ್ಳಲಾಗಿದೆ.

ಪರಿಸರ ಸಂರಕ್ಷಣೆ, ಪರಿಸರ ಸಚ್ಛತೆಯ ಜಾಗೃತಿ ಮತ್ತು ಜನತೆಗೆ ಪರಿಸರ ರಕ್ಷಣೆ ಕಾಳಜಿ ಮೂಡಲು ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ ಅವರು ರೂಪಿಸಿದ ಈ ವಿನೂತನ ಯೋಜನೆ ಫಲ ಕೊಟ್ಟಿದೆ.

ಭಕ್ತರಿಗೆ ನೆರಳಿನಾಸರೆ: ಕಳೆದ ಐದು ದಿನಗಳಿಂದ ಅಲ್ಲಲ್ಲಿ ಶಾಮಿಯಾನ ಅಳವಡಿಸಿ ಪರಿಸರ ಜಾಗೃತಿ ಫಲಕ, ಕಸದ ಬುಟ್ಟಿ, ನೀರಿನ ವ್ಯವಸ್ಥೆ, ನೆರಳಿನ ಆಸರೆಯನ್ನು ಪಾದಯಾತ್ರಿಗಳಿಗೆ ಇಲಾಖೆ ಕಲ್ಪಿಸಿದೆ. ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಿ ಭಕ್ತರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿದೆ.

ಬಿಸಿಲೆ ಘಾಟ್ ರಸ್ತೆ, ಸುಬ್ರಹ್ಮಣ್ಯ, ಕುಲ್ಕುಂದ, ಕೈಕಂಬ, ಕಿದು, ಬಿಳಿನೆಲೆ, ನೆಟ್ಟಣ, ಮರ್ಧಾಳ ಮೊದಲಾದ ಕಡೆಗಳಲ್ಲಿ ಶಾಮಿಯಾನ ಅಳವಡಿಸಿ ಭಕ್ತರಿಗೆ ಅನುಕೂಲತೆ ಒದಗಿಸಲಾಗಿದೆ. ಬಿಸಿಲೆ ರಸ್ತೆ, ಕುಲ್ಕುಂದ, ಸುಬ್ರಹ್ಮಣ್ಯ,ಕಿದು, ಬಿಳಿನೆಲೆ, ನೆಟ್ಟಣ ರಸ್ತೆಯುದ್ದಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಸ್ವಚ್ಛಗೊಳಿಸಿ, ಜಾಗೃತಿ ಫಲಕಗಳನ್ನು ಅಳವಡಿಸಿದ್ದಾರೆ.

ಇಲ್ಲಿ ಕಸ ಎಸೆಯಿರಿ: ಕಾಡಂಚಿನ ರಸ್ತೆ ಬದಿಯಲ್ಲಿ ಕಸ ಹಾಕಲು ಅಲ್ಲಲ್ಲಿ ಕಸದ ಬುಟ್ಟಿ ಇರಿಸಿ ‘ಇಲ್ಲಿ ಕಸ ಎಸೆಯಿರಿ’ ಎಂದು ನಾಮ ಫಲಕವನ್ನು ಅಳವಡಿಸಲಾಗಿದೆ. ಭಕ್ತರು ಎಲ್ಲೆಂದರಲ್ಲಿ ಕಸ, ಪೇಪರ್, ಪ್ಲಾಸ್ಟಿಕ್ ಬಾಟಲಿ ಎಸೆಯುವುದಕ್ಕೆ ಕಡಿವಾಣ ಬಿದ್ದಿದೆ. ಭಕ್ತರು ಕೂಡಾ ಕಸದಬುಟ್ಟಿಗೇ ಕಸ ಹಾಕಿ ಪರಿಸರ ಸ್ವಚ್ಛತೆಗೆ ಕೈಜೋಡಿಸಿದ್ದಾರೆ. ರಸ್ತೆಯ 10 ಕಡೆಗಳಲ್ಲಿ ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ಕಸ ಹಾಕಲು ಅಲ್ಲಲ್ಲಿ ಕಸದ ಬುಟ್ಟಿ ಅಳವಡಿಕೆ, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿಗಾಗಿ ಶಾಮಿಯಾನ, ಪರಿಸರ ಜಾಗೃತಿ ಮೂಡಿಸಲು ಜಾಗೃತಿ ಫಲಕ ಹಾಕಲಾಗಿದೆ. ಸಿಬ್ಬಂದಿ ಮೂಲಕವೂ ಜಾಗೃತಿ ಕಾರ್ಯ ನಡೆಸಲಾಯಿತು.ಈ ಮೂಲಕ ನಮ್ಮ ವಿಶೇಷ ಯೋಜನೆ ಫಲಪ್ರಧವಾಗಿದೆ ಎಂಬ ಸಂತಸ ಇದೆ - ಪ್ರವೀಣ್ ಕುಮಾರ್ ಶೆಟ್ಟಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು(ಎಸಿಎಫ್), ಸುಬ್ರಹ್ಮಣ್ಯ ಉಪ ವಿಭಾಗ, ಸುಳ್ಯ https://www.vijayavani.net/felicitation-ceremony-at-balanja https://www.vijayavani.net/sanction-of-grant-for-construction-of-school-toilet