ಜಿಲ್ಲೆ

ರಾಜ್ಯದಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಳ: ಡಿಎಫ್‌ಒ

ಡುಪಿ: ಅರಣ್ಯ ಇಲಾಖೆ ದಕ್ಷ ಕಾರ್ಯನಿರ್ವಹಣೆಯಿಂದಾಗಿ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಳವಾಗಿದೆ ಎಂದು ಕುಂದಾಪುರ ವಿಭಾಗದ ಡಿಎಫ್ಒ ಆಶೀಶ್ ರೆಡ್ಡಿ ಹೇಳಿದರು.

ಭಾನುವಾರ ಐ.ಎಂ.ಎ ಭವನದಲ್ಲಿ ರಾಜ್ಯ ಉಪ ವಲಯ ಅರಣ್ಯಾಧಿಕಾರಿ ಸಂಘ, ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಆಶ್ರಯದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಅರಣ್ಯ ಹುತಾತ್ಮರ ಸ್ಮರಣಾರ್ಥ 22 ನೇ ವರ್ಷದ ರಕ್ತದಾನ ಶಿಬಿರದಲ್ಲಿ ಸ್ವಯಂ ರಕ್ತದಾನ ಮಾಡಿ, ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಸಿರು ಉಳಿಸಿ, ಮಳೆಗಾಗಿ ,ಸಮೃದ್ದಿಗಾಗಿ , ನೀರಿಗಾಗಿ , ಮುಂದಿನ ಪೀಳಿಗೆಗಾಗಿ ವನ ಉಳಿಸಿ ಎನ್ನುತ್ತೇವೆ. ಅರಣ್ಯ ರಕ್ಷಿಸಿ ಬೆಳಸುವಲ್ಲಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಕಾರ್ಯವು ಅತ್ಯಂತ ಪ್ರಮುಖವಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಸಹ ಅರಣ್ಯ ಮತ್ತು ಕಾಂಡ್ಲಾವನದ ವಿಸ್ತೀರ್ಣವು ಹೆಚ್ಚಾಗಿದೆ. ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟದ ಜೀವ ವೈವಿದ್ಯವನ್ನು ಉಳಿಸಿ, ಬೆಳೆಸುವುದರಲ್ಲಿ ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರೂ ಭಾಗೀದಾರಿಕೆಯೂ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಅಧಿಕವಾಗುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತಡಕ್ಕೆ ಒಳಗಾಗದೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ಕೇಶವ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 22 ರಕ್ತದಾನ ಶಿಬಿರಗಳನ್ನು ಆಯೋಜಿಸಿ 2,000 ಯೂನಿಟ್ ಗೂ ಅಧಿಕ ರಕ್ತವನ್ನು ಸಿಬ್ಬಂದಿ ದಾನ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಂದ ಬರುವ ದೂರವಾಣಿ ಕರೆಗಳಿಗೆ ಸ್ಪಂದಿಸಿ, ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ರಕ್ತ ನೀಡಲಾಗುತ್ತಿದೆ ಎಂದರು.

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿ ಸಂಘ ಜಿಲ್ಲಾ ಅಧ್ಯಕ್ಷ ನಾಗೇಶ್ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ, ಐ.ಎಂ.ಎ ಅಧ್ಯಕ್ಷ ಡಾ. ವಿನಾಯಕ ಶೆಣೈ, ಮಂಗಳೂರು ಅರಣ್ಯ ಜಾಗೃತ ದಳದ ಅಧಿಕಾರಿ ಶ್ರೀಧರ್, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್, ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ, ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಗೌರವಾಧ್ಯಕ್ಷ ದೇವರಾಜ ಪಾಣ ಎಚ್., ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ಉಪಸ್ಥಿತರಿದ್ದರು. ಸಂಘದ ಪ್ರದಾನ ಕಾರ್ಯದರ್ಶಿ ವೀರಣ್ಣ ಮಾಯಾಚಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಕರುಣಾಕರ ಜೆ ಆಚಾರ್ಯ ವಂದಿಸಿದರು.