ಸೋಮನಮರಡಿಯಲ್ಲಿ ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ದೇವದುರ್ಗದಲ್ಲಿ ಶಿರಸ್ತೇದಾರ್ ವೆಂಕಟೇಶಗೆ ಕರ್ನಾಟಕ ರೈತ ಸಂಘ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ದುರುಗಣ್ಣ ಇರಬಗೇರಾ, ಜಿ.ಅಮರೇಶ, ಲಕ್ಷ್ಮಣ, ಶಿವರಾಜ ಕಟ್ಟಿಮನಿ, ಮಾನಸಯ್ಯ, ತಿಮ್ಮಯ್ಯ, ಲಚಮಯ್ಯ ಇತರರಿದ್ದರು. 
ಜಿಲ್ಲೆ

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ರುದ್ರಪ್ಪ ವಾಲಿ

ದೇವದುರ್ಗ: ಸೋಮನಮರಡಿ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಅರಣ್ಯ ಇಲಾಖೆ ಸಸಿನೆಡಲು ಗುಂಡಿತೋಡಿ ಒಕ್ಕಲೆಬ್ಬಿಸಿರುವುದನ್ನು ಖಂಡಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಕರ್ನಾಟಕ ರೈತ ಸಂಘದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸೋಮನಮರಡಿ ಸೀಮಾ ಸರ್ವೇ ನಂಬರ್ 93/*/*ರಲ್ಲಿ 1993ರಲ್ಲಿ 8ರೈತರಿಗೆ ಜಮೀನು ಮಂಜೂರಾಗಿ ಪಹಣಿ ಪತ್ರದಲ್ಲಿ ಹೆಸರು ಕೂಡ ಬಂದಿದೆ. ಅಲ್ಲದೆ ಸದರಿ ರೈತರು 50, 53, 57ರಡಿ ರೈತರು ಅರ್ಜಿ ಸಲ್ಲಿಸಿದ್ದಾರೆ. ರೈತರು ಉಳಿಮೆ ಮಾಡುತ್ತಿರುವ ಜಮೀನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ನುಗ್ಗಿ ಗುಂಡಿಗಳನ್ನು ಅಗೆದು ಗಿಡ ನೆಡಸಲು ಮುಂದಾಗಿದ್ದಾರೆ. ಇದು ರೈತರಿಗೆ ಬರಸಿಡಿಲು ಬಡಿದಂತಾಗಿದ್ದು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿದರು.

ರೈತರನ್ನು ಒಕ್ಕಲೆಬ್ಬಿಸದೆ ಒಕ್ಕಲುತನ ಮಾಡಲು ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಜಾಲಹಳ್ಳಿ, ಗಲಗ, ಹೊಸೂರು ಸಿದ್ದಾಪುರ, ಬೊಮ್ಮನಹಳ್ಳಿ, ಬುಂಕಲದೊಡ್ಡಿಯಲ್ಲಿ ಉಳಿಮೆ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕು. ಜಂಟಿ ಸರ್ವೇ ನಡೆಸಿ ರೈತರಿಗೆ ಪೋಡಿ ನಕಾಶ ಮಾಡಿಸಿಕೊಡಬೇಕು. ಅರಣ್ಯ ಇಲಾಖೆ ಗುಂಡಿತೋಡಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.