ಚನ್ನಗಿರಿ: ತಾಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯ ಗಂಡುಗನಹಂಕಲು ಗ್ರಾಮದ ಅಂಚಿನಲ್ಲಿರುವ ಅಡಕೆ ತೋಟ ಮತ್ತು ಜಮೀನುಗಳಿಗೆ ಕಾಡಾನೆಗಳು ಪ್ರತಿದಿನ ನುಗ್ಗಿ ಬೆಳೆ ನಾಶ ಮಾಡುತ್ತಿ್ತುವುದನ್ನು ತಪ್ಪಿಸುವಂತೆ ಒತ್ತಾಯಿಸಿ ರೈತರು ಅರಣ್ಯ ಇಲಾಖೆ ಎದುರು ಭಾನುವಾರ ಪ್ರತಿಭಟನೆ ಮಾಡಿದರು.
6 ತಿಂಗಳಿಂದ ಕಾಡಾನೆ, ಚಿರತೆ, ಕರಡಿ ದಾಳಿ ದಾಳಿ ನಡೆಯುತ್ತಿದೆ. ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಲಾಗಿದೆ ಮತ್ತು ಅರಣ್ಯ ಇಲಾಖೆಗೆ ಕರೆ ಮಾಡಿದರೆ ಅವರು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ತೋಟದಲ್ಲಿ ಆನೆಗಳು ಕೆಡವಿ ಹಾಕಿದ ಅಡಕೆ ಮರಗಳನ್ನು ಟ್ರ್ಯಾಕ್ಟರ್ ಮೂಲಕ ತಂದು ಅರಣ್ಯ ಇಲಾಖೆ ಮುಂದೆ ಹಾಕಿ, ಪರಿಹಾರಕ್ಕೆ ಆಗ್ರಹಿಸಿದರು.
ಈ ವೇಳೆ ಗ್ರಾಮದ ಮುಖಂಡ ರುದ್ರೇಶ್ ಉಬ್ರಾಣಿ ಮಾತನಾಡಿ, ಕಾಡಾನೆಗಳ ಹಾವಳಿ ತಡೆಯುವಲ್ಲಿ ಇಲಾಖೆಯವರು ವಿಫಲರಾಗಿದ್ದಾರೆ. ಸುಮಾರು 45 ಎಕರೆ ಪ್ರದೇಶದಲ್ಲಿನ ಅಡಕೆ ಮರಗಳು, ರಾಗಿ, ಮೆಕ್ಕೆಜೋಳ ಸಂಪೂರ್ಣ ನಾಶವಾಗಿವೆ ಎಂದರು.
ತಾಲೂಕಿನ ಉಬ್ರಾಣಿ, ದುರ್ವಿಗೆರೆ, ಬಸವಾಪುರ, ಮಾನಮಟ್ಟಿ, ಕಗ್ಗಿ, ಮುಗಳಿಹಳ್ಳಿ, ಚಿಕ್ಕಮಳಲಿ ತಾಂಡ, ಚಿಕ್ಕಮಳಲಿ, ಬಂಡೀಗುಡ್ಡ, ಚಿಕ್ಕಸಂದಿ, ಕೊಡಕಿಕೆರೆ, ಬಸವಾಪುರ ಗ್ರಾಮದ ತೋಟಗಳಿಗೆ ಕಾಡಾನೆಗಳು ರಾತ್ರಿ ವೇಳೆ ಬಂದು ಬೆಳೆ ನಾಶ ಮಾಡಿ, ಬೆಳಗಾಗುತ್ತಿದಂತೆ ಕಾಡಿಗೆ ವಾಪಸ್ ಹೋಗುತ್ತಿವೆ. ಇದರಿಂದ ರೈತರು ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ. ಅಲ್ಲದೇ ಗಂಡುಗನಹಂಕಲು ಗ್ರಾಮ ಅರಣ್ಯ ಪ್ರದೇಶ ಹತ್ತಿರವಿರುವುದರಿಂದ ರಾತ್ರಿ ಮನೆಯಿಂದ ಹೊರ ಬರಲು ಜನರು ಭಯಪಡುತ್ತಿದ್ದಾರೆ ಎಂದು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ ಮಾತನಾಡಿ, ತೋಟಗಳಿಗೆ ನುಗ್ಗಿ ಜನರ ಜೀವ ಬಲಿ ತೆಗೆದುಕೊಂಡ ಮೂರು ಕಾಡಾನೆಗಳನ್ನು ಅರಣ್ಯ ಇಲಾಖೆಯವರು ಹಿಡಿದಿದ್ದಾರೆ. ಸಾರ್ವಜನಿಕರು ಗಲಾಟೆ ಮಾಡುವ ಮೊದಲು ಇಲಾಖೆಯವರು ಎಚ್ಚೆತ್ತುಕೊಂಡು ಅವರಿಗೆ ರಕ್ಷಣೆ ನೀಡಬೇಕು ಮತ್ತು ಪ್ರಾಣಿಗಳ ದಾಳಿ ತಡೆಯಲು ಕ್ರಮ ಕೈಗೊಳ್ಳಬೇಕು ಎಂದರು.
ಚನ್ನಗಿರಿ ವಲಯ ಅರಣ್ಯಾಧಿಕಾರಿ ಶ್ವೇತಾ ಮಾತನಾಡಿ, ಈಗಾಗಲೇ ಪುಂಡಾನೆ ಹಿಡಿಯಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಮತ್ತು ಆನೆಯನ್ನು ಗ್ರಾಮದಿಂದ ಓಡಿಸಲು ಸಿಬ್ಬಂದಿ ನೇಮಕ ಮಾಡಲಾಗಿದೆ. ಗ್ರಾಮದ ಸುತ್ತ ಕಂದಕ ತೆಗೆಯುವ ಕಾಮಗಾರಿ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರುದ್ರೇಶ್, ಗೋವಿಂದನಾಯ್ಕ, ಹನುಮಂತನಾಯ್ಕ, ಪ್ರಕಾಶ್, ಉಮೇಶ್, ಚನ್ನಬಸಪ್ಪ, ಶಿವನಾಯ್ಕ, ಮುನಿರ್ ನಾಯ್ಕ ಗ್ರಾಮಸ್ಥರು ಇದ್ದರು.