ಕೆ. ಕೆಂಚಪ್ಪ, ಮೊಳಕಾಲ್ಮೂರು
ದೇಶಿ ತಳಿಗಳ ಗಿಡ, ಮರ ಪರಿಚಯಿಸುವ ಸದುದ್ಧೇಶದಿಂದ ಪಟ್ಟಣದ ಹೊರ ವಲಯದ ಅರಣ್ಯ ಪ್ರದೇಶದ 60 ಎಕರೆ ವಿಸ್ತೀರ್ಣದಲ್ಲಿ ಬರೋಬ್ಬರಿ ಒಂದು ಕೋಟಿ ರೂ. ಮೊತ್ತದಲ್ಲಿ ಕಾಡು ಸಂಪತ್ತು ಸೇರಿ ಎಲ್ಲ ರೀತಿಯ ಮೂಲ ಸೌಕರ್ಯಗಳುಳ್ಳ ನಗರವನ ನಿರ್ಮಾಣ ಕಾರ್ಯ ಶುರುವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ದೇಶಿ ಗಿಡ-ಮರಗಳನ್ನು ಬೆಳೆಸಿ ಜನರಿಗೆ ಅವುಗಳ ಪರಿಚಯ ಮಾಡಿಕೊಡುವುದು ಪ್ರಮುಖ ಉದ್ದೇಶವಾಗಿದೆ. ಮಕ್ಕಳಾದಿಯಾಗಿ ಜನರು ವಿಶ್ರಾಂತಿ ಪಡೆಯಲು ಒಂದು ಸುಂದರ ನಗರವನ ನಿರ್ವಿುಸುವ ಮಹತ್ವಪೂರ್ಣ ಯೋಜನೆ ಇದಾಗಿದೆ. 3-5 ವರ್ಷದೊಳಗೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ.
ಮೊಳಕಾಲ್ಮೂರಿನ ಸಾಲುಮರದ ತಿಮ್ಮಕ್ಕ ಉದ್ಯಾನವನ ಸಮೀಪದ ಹಿರೇ ಅಡವಿಯಲ್ಲಿ ನಿರ್ವಣಕ್ಕೆ ಈಗಾಗಲೇ ಚಾಲನೆ ಕೊಡಲಾಗಿದೆ. ಸುತ್ತಲೂ ಕಾಂಪೌಂಡ್, ದ್ವಾರ ಮಂಟಪ, ನಾನಾ ತಳಿಯ ಸಸ್ಯಗಳನ್ನು ಬೆಳೆಸಲು ಗುಂಡಿಗಳನ್ನು ತೋಡಲಾಗುತ್ತಿದೆ.
ಒಂದು ಸಣ್ಣ ಕೆರೆ ನಿರ್ವಣ(ಗೋಕಟ್ಟೆ), ವಿಶೇಷವಾಗಿ ಕರ್ನಾಟಕದ ಮಲೆನಾಡಿನಲ್ಲಿ ಲಭ್ಯವಿರುವ ಬಿದಿರು, ರಾಂಪತ್ರೆ, ಬಿರಾನ್, ಗೇರು, ಮಡಾನ್, ಕಾಫೀ ಗಿಡ, ಗೋಡಂಬಿ ಇನ್ನೂ ಹಲವು ಪ್ರಭೇದಗಳ ನೆಡುತೋಪು, ರಾಶಿವನ, ನಕ್ಷತ್ರವನ ಹಾಗೂ ಔಷಧೀಯ ಸಸ್ಯಗಳುಳ್ಳ ಧನ್ವಂತ್ರಿ ವನ, ಜಪಾನ್ ಮಾದರಿಯ ಮೀಯೊವಾಕಿ ಸಸ್ಯಕ್ಷೇತ್ರ. ಪರಗೋಲ, ಹೀಗೆ ಹಲವು ಬಗೆಯ ವನ ಸಂಪತ್ತನ್ನು ಇಲ್ಲಿ ಬೆಳೆಸಲಾಗುತ್ತದೆ.
ಮಕ್ಕಳಿಗೆ ಅಗತ್ಯ ಆಟಿಕೆಗಳು, ಹಿರಿಯರಿಗೆ ಕುಳಿತು ವಿಶ್ರಾಂತಿ ಪಡೆಯಲು ಕುರ್ಚಿಗಳು, ಶುದ್ಧ ಕುಡಿಯುವ ನೀರು, ಶೌಚಗೃಹ ಸೇರಿ ಒಟ್ಟಾರೆಯಾಗಿ ಜನರನ್ನು ಆಕರ್ಷಿಸುವ ರೀತಿಯಲ್ಲಿ ನಗರವನ ನಿರ್ವಣವಾಗಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಪೂರ್ಣ ನಗರವನ ಯೋಜನೆ ಮೊಳಕಾಲ್ಮೂರು ಪಾಲಿಗೆ ಆತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ದೇಶದ ಉದ್ದಗಲಕ್ಕೂ ಆಯ್ದ ಕಡೆ ನಗರವನ-400, ನಗರವಾಟಿಕ 200 ಕಡೆ ನಿರ್ವಣಕ್ಕೆ ಆದ್ಯತೆ ಕೊಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ 895 ಕೋಟಿ ರೂ. ಮೀಸಲಿಟ್ಟಿದೆ. ಕರ್ನಾಟಕದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆ ತಾಲೂಕುಗಳಿಗೆ ಮಂಜೂರಾಗಿದೆ. ಯೋಗಾಭ್ಯಾಸ, ಓಪನ್ ಜಿಮ್ ಅಭ್ಯಾಸಕ್ಕೂ ಆದ್ಯತೆ ಕೊಡುವ ಚಿಂತನೆ ಇದೆ. ಆದಷ್ಟು ತ್ವರಿತವಾಗಿ ನಿರ್ವಿುಸುವ ಗುರಿ ಇದೆ. ಶ್ರೀಹರ್ಷ, ವಲಯ ಅರಣ್ಯಾಧಿಕಾರಿ. ಸ್ಪರ್ಧಾತ್ಮಕ ತಂತ್ರಜ್ಞಾನದ ಜಗತ್ತಿನಲ್ಲಿ ಕಾಡು, ಹಣ್ಣು, ತರಕಾರಿ, ದವಸ ದಾನ್ಯಗಳ ಬಗ್ಗೆ ಮಕ್ಕಳಿಗೆ ಅರಿವಿಲ್ಲ. ಕೃಷಿ ಪದವಿ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಸಮರ್ಥವಾಗಿ ಎದುರಿಸಲು ಪರದಾಡುವ ಪರಿಸ್ಥಿತಿ ಇದೆ. ಅದಕ್ಕೆ ಪೂರಕವಾಗಿ ಸಮಗ್ರ ಮಾಹಿತಿ ಸಂಗ್ರಹಿಸಲು ನಗರವನ ಅತ್ಯಂತ ಉಪಯೋಗಕ್ಕೆ ಬರಲಿದೆ. ಡಾ. ಪಿ.ಎಂ. ಮಂಜುನಾಥ, ವೈದ್ಯರು ಪ್ರಸ್ತುತ ಮಕ್ಕಳು ತರಗತಿ ಶಿಕ್ಷಣದ ಒತ್ತಡದಲ್ಲಿ ಆಹಾರ ಪದಾರ್ಥಗಳ ಪರಿಚಯವೇ ಇಲ್ಲದಂತಾಗಿದೆ. ಬಯಲುಸೀಮೆ ಪ್ರದೇಶದಲ್ಲಿ ಎಲ್ಲ ರೀತಿಯ ಅರಣ್ಯ ಸಂಪತ್ತು, ಗಿಡ, ಮರಗಳ ಪರಿಚಯಿಸುವ ಉದ್ದೇಶದಿಂದ ಸುಂದರ ಉದ್ಯಾನವನ ನಿರ್ವಣವಾಗುತ್ತಿರುವುದು ಅತ್ಯಂತ ಆಶಾದಾಯಕ ಸಂಗತಿ. ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ಒತ್ತುಕೊಡಬೇಕು. ಪಿ.ಜಿ. ವಸಂತಕುಮಾರ, ಅಧ್ಯಕ್ಷರು, ತಾಲೂಕು ವಕೀಲರ ಸಂಘ.