ಜಿಲ್ಲೆ

ಜನರಿಗೆ ಮಾರಕವಾಗಲಿದೆ ಅರಣ್ಯ ಕಾಯ್ದೆ

ಮೂಡಿಗೆರೆ: ಅರಣ್ಯ ಕಾಯ್ದೆ ಜಾರಿಯಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 175 ಗ್ರಾಮಗಳ ಗ್ರಾಮಸ್ಥರು ಬೀದಿ ಪಾಲಾಗಲಿದ್ದಾರೆ. ಕಾಯ್ದೆ ಜಾರಿಯಾಗದಂತೆ ಸರ್ಕಾರ ತಡೆಯಬೇಕು. ಇಂತಹ ಮಾರಕ ಕಾಯ್ದೆಗಳಿಂದ ಜನ ನೆಮ್ಮದಿ ಕಳೆದುಕೊಳ್ಳುವಂತಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊಪ್ಪ ಅರಣ್ಯ ವ್ಯಾಪ್ತಿಯ 123, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 52 ಗ್ರಾಮದ ಪ್ರದೇಶ ಅರಣ್ಯ ಕಾಯ್ದೆ 4/1 ಎ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಅರಣ್ಯ ಕಾಯ್ದೆ 17/1 ಜಾರಿಯಾಗಲು ಅರಣ್ಯ ಇಲಾಖೆ ಕಾಯುತ್ತಿದೆ. ಪ್ರಕ್ರಿಯೆ ನಡೆದರೆ ಕಳಸ ತಾಲೂಕಿನ ತನುಡಿ, ಎಸ್.ಕೆ ಮೇಗಲ್, ಮಾವಿನಕೆರೆ, ಆಲ್ದೂರು ಹೋಬಳಿ ಹವಳ್ಳಿ ಗ್ರಾಮ ಸೇರಿದಂತೆ 175 ಗ್ರಾಮದ ಜನರು ಬೀದಿ ಪಾಲಾಗುತ್ತಾರೆ. ಗ್ರಾಮ ಪಂಚಾಯಿತಿಗಳಲ್ಲಿ ಹಂಚಿಕೆ ಮಾಡಿದ ನಿವೇಶನ ಹಾಗೂ ನಿವೇಶನಕ್ಕಾಗಿ ಕಾಯ್ದಿರಿಸಿರುವ ಜಾಗ ಅರಣ್ಯಇಲಾಖೆ ಪಾಲಾಗಲಿದೆ. ಇದರಿಂದ ಮುಂದಿನ ತಲೆಮಾರಿನಲ್ಲಿಯೂ ನಿವೇಶನ ರಹಿತರು, ನಿವೇಶನ ರಹಿತರಾಗಿ ಉಳಿಯಲಿದ್ದಾರೆ ಎಂದು ತಿಳಿಸಿದರು.

ಅರಣ್ಯ ಇಲಾಖೆ, ಜನರನ್ನು ಶೋಷಣೆ ಮಾಡಿದ್ದರಿಂದ ಜನ ರೊಚ್ಚಿಗೆದ್ದಿದ್ದಾರೆ. ಜಿಲ್ಲೆಯ 175 ಗ್ರಾಮಗಳು ಅರಣ್ಯ ಕಾಯ್ದೆ 17/1 ಕ್ಕೆ ಸೇರ್ಪಡೆಯಾಗದಂತೆ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಂತಹ ಮಾರಕ ಕಾಯ್ದೆ ಜಾರಿಯಾಗುವುದನ್ನು ತಡೆಗಟ್ಟಬೇಕು. ಇಲ್ಲವಾದರೆ ಜನ ತಾಳ್ಮೆ ಕಳೆದುಕೊಂಡರೆ ಕಾಡು ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.