ಸಂಡೂರು: ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ 2023 ಅನ್ನು ಲೋಕಸಭೆ ಅಧಿವೇಶನದಲ್ಲಿ ಮಂಡನೆ ಮಾಡಬಾರದೆಂದು ಆಗ್ರಹಿಸಿ ಜನ ಸಂಗ್ರಾಮ ಪರಿಷತ್ ಗುರುವಾರ ತಹಸೀಲ್ದಾರ್ ಸುಬ್ಬಾರಾವ್ ದೇಸಾಯಿಗೆ ಮನವಿ ಸಲ್ಲಿಸಿತು.
ರಾಜ್ಯ ಉಪಾಧ್ಯಕ್ಷ ಟಿ.ಎಂ.ಶಿವಕುಮಾರ್ ಮಾತನಾಡಿ, 1996ರಲ್ಲಿ ಟಿ.ಎನ್.ಗೋದವರ್ಮನ್ ತಿರುಮಲ್ಕಪಾಡ್ ಮೊಕದ್ದಮೆ ವೇಳೆ ಒಂದು ಐತಿಹಾಸಿಕ ತೀರ್ಪು ನೀಡಿ ದೇಶದ ಅಧಿಕೃತ ಅರಣ್ಯವೆಂದು ಪರಿಗಣಿಸದೆ ಇರುವ ಅರಣ್ಯ ವ್ಯಾಪ್ತಿಗೆ ರಕ್ಷಣೆ ನೀಡುವಲ್ಲಿ ಸಫಲವಾಗಿತ್ತು. ಸ್ವಾತಂತ್ರೃ ನಂತರದ 33 ವರ್ಷಗಳಲ್ಲಿ 42 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲಾಯಿತು.
1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಈ ಪ್ರಮಾಣ 15 ಲಕ್ಷ ಹೆಕ್ಟೇರ್‌ಗೆ ಇಳಿಯಿತು ಎಂಬುದು ಗಮನಾರ್ಹ ಸಂಗತಿ ಎಂದರು. ಪರಿಷತ್ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಲದಳ್ಳಿ ಮಾತನಾಡಿ, 100 ಕಿಮೀ ಒಳಭಾಗದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಲು ಸಕ್ರಮ ಪ್ರಾಧಿಕಾರದ ಅನುಮತಿ ಪಡೆಯುವುದನ್ನು ತಿದ್ದುಪಡಿ ಮಸೂದೆ ಹೊರಗಿಡುತ್ತದೆ.
ಈಶಾನ್ಯ ರಾಜ್ಯದ ದಟ್ಟ ಕಾಡುಗಳು ಹಾಗೂ ಪಶ್ಚಿಮ ಘಟ್ಟಗಳು ನಾಶವಾಗಲಿವೆ. ಹವಾಗುಣ ತುರ್ತು ಪರಿಸ್ಥಿತಿಯ ಕಾರಣಕ್ಕೆ ಋತುಮಾನಗಳ ಲೆಕ್ಕಾಚಾರವೇ ತಪ್ಪಿಹೋಗಿದೆ. ಇಷ್ಟು ಪ್ರಮಾಣದ ಅರಣ್ಯಗಳನ್ನು ಕಳೆದುಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ.
ಹವಾಗುಣ ಬದಲಾವಣೆ ತಡೆಯಲು ಹಾಲಿ ಅರಣ್ಯ ಪ್ರದೇಶಗಳನ್ನು ಉಳಿಸಿಕೊಳ್ಳುವುದು ಹಾಗೂ ರಾಷ್ಟ್ರೀಯ ಅರಣ್ಯ ನೀತಿ 1988ರಂತೆ ಕನಿಷ್ಠ ಶೇ.33 ಅರಣ್ಯ ಪ್ರದೇಶವನ್ನು ಕಾಯ್ದಿಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಕಾರ್ಪೋರೇಟರ್ಸ್‌ಗೆ ಸುಲಭವಾಗಿ ಲಭ್ಯವಾಗುವಂತೆ ಕಾಯ್ದೆ ತಿದ್ದುಪಡಿ ತರಲು ಹೊರಟಿರುವುದು ದುರಂತ ಎಂದು ಕಿಡಿಕಾರಿದರು.