ಜಿಲ್ಲೆ

ಅರಣ್ಯ ವೀಕ್ಷಕರ ಬುನಾದಿ ತರಬೇತಿ ಘಟಿಕೋತ್ಸವ

ಸುನಿಲ್ ಪೊನ್ನೇಟಿ

ಕುಶಾಲನಗರ:

ತರಬೇತಾರ್ಥಿಗಳು ತರಬೇತಿ ಅವಧಿಯಲ್ಲಿ ಕಲಿತದ್ದನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ಉತ್ತಮ ನೌಕರರಾಗಿ ಸೇವೆ ಮಾಡಬೇಕೆಂದು ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯ ಹೇಳಿದರು. ಕುಶಾಲನಗರದ ಗಂಧದಕೋಠಿಯಲ್ಲಿನ ಅರಣ್ಯ ತರಬೇತಿ ಕೇಂದ್ರದ ನಾಲ್ಕನೇ ತಂಡದ ಅರಣ್ಯ ವೀಕ್ಷಕರ ಬುನಾದಿ ತರಬೇತಿಯ ಘಟಿಕೋತ್ಸವ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಮಾನವ ವನ್ಯ ಜೀವಿ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅರಣ್ಯ ನೌಕರರಾಗಿ ಕರ್ತವ್ಯ ನಿರ್ವಹಿಸುವ ಅರಣ್ಯ ನೌಕರರು ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಒಡನಾಟ ಹಾಗೂ ಅಧಿಕಾರಿಗಳೊಂದಿಗೆ ಕಾಯಕ ನಿಷ್ಠೆ ಪಾಲಿಸಿದರೆ ಒಳ್ಳೆಯ ಸೇವೆ ಸಾಧ್ಯವಾಗುತ್ತದೆ ಎಂದರು.

ಬೆಂಗಳೂರಿನ ಕಾಡುಗೋಡಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಅರಣ್ಯ ತರಬೇತಾರ್ಥಿಗಳು ಜೀವನ ಮೌಲ್ಯಗಳನ್ನು ಮೊದಲು ಬೆಳೆಸಿಕೊಳ್ಳಬೇಕು. ಅರಣ್ಯ ಇಲಾಖೆಯನ್ನು ಪ್ರತಿನಿಧಿಸುವ ನೌಕರರು ಜನಸಾಮಾನ್ಯರ ಜೊತೆ ಗೌರವದ ವರ್ತನೆ ತೋರಬೇಕು. ಜೀವ ಪ್ರಬೇಧಗಳನ್ನು ಕುತೂಹಲಕಾರಿಯಾಗಿ ಅರಿಯುವಂತಾಗಬೇಕು ಎಂದರು.

ವಿರಾಜಪೇಟೆ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್. ಜಗನ್ನಾಥ್ ಮಾತನಾಡಿ, ನಾಡಿನ ನೆಲ -ಜಲ, ಪರಿಸರದ ಸಂರಕ್ಷಣೆಗೆ ತರಬೇತಾರ್ಥಿಗಳು ಸದಾ ಶ್ರಮಿಸಬೇಕು.

ಜೀವ ವೈವಿಧ್ಯ ತಾಣಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕು. ಸರ್ಕಾರ ಕೊಡುವ ಸಂಬಳಕ್ಕೆ ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸಬೇಕೆಂದರು. ಮಡಿಕೇರಿ ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಅರಣ್ಯಗಳಲ್ಲಿ ಸಕಲ ಜೀವಿಗಳು ಜೀವಿಸಬೇಕು. ಸುಸ್ಥಿರ ಸಮಾಜ ಹಾಗೂ ಸುಸ್ಥಿರ ಜೀವ ಕೋಶ ನಿರ್ಮಾಣ ಅರಣ್ಯ ಇಲಾಖೆಯ ಧ್ಯೇಯವಾಗಿದೆ ಎಂದರು.

ಕುಶಾಲನಗರದ ಅರಣ್ಯ ತರಬೇತಿ ಕೇಂದ್ರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಬಿದರಿ ಅವರು ಕಳೆದ ಆರು ತಿಂಗಳ ಅವಧಿಯಲ್ಲಿ ತರಬೇತಾರ್ಥಿಗಳಿಗೆ ನಡೆಸಿಕೊಟ್ಟ ತರಬೇತಿಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು. ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ ಅಕಾರ್ಯಕ್ರಮಕ್ಕೂ ಮುನ್ನಾ ತರಬೇತುದಾರರು ನಡೆಸಿಕೊಟ್ಟ ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿದರು.

ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಗಾನಶ್ರೀ, ಸಂಶೋಧನಾ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತೀರ್ಥ, ತರಬೇತಿ ಕೇಂದ್ರದ ಉಪವಲಯ ಅರಣ್ಯಾಧಿಕಾರಿ ಐಶ್ವರ್ಯ ಆರ್. ಗೌಡ, ಎಂ.ನಾಗೇಶ್ ಕುಮಾರ್, ರಿಷಾ ಪಾರ್ವತಿ, ಕೆ.ಎಲ್.ನಳಿನಿ, ಗಸ್ತು ಅರಣ್ಯಪಾಲಕ ಆರ್.ರಘು ಇದ್ದರು.