ಜಿಲ್ಲೆ

ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ವಿದೇಶಿಗರ ಭೇಟಿ

ಮೈಸೂರು: ರೇಷ್ಮೆ ಉದ್ಯಮ ತಿಳಿದುಕೊಳ್ಳಲು ಬಯಸಿದರೆ ಅದಕ್ಕೆ ಅಗತ್ಯ ನೆರವು ನೀಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿರಾಜ್ ಸಿಂಗ್ ತಿಳಿಸಿದರು.

ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ವಿದೇಶಿಗರಿಗಾಗಿ ಆಯೋಜಿಸಿದ್ದ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ತರಬೇತಿ ಶಿಬಿರದ ಸಮಾರೋಪ ಹಾಗೂ ಶಿಬಿರಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತಕ್ಕೆ ಬಂದು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿದಿದ್ದು, ತಾವು ಇದನ್ನು ತಮ್ಮ ದೇಶದಲ್ಲಿ ಬಳಕೆ ಮಾಡಬೇಕು. ನಾವು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ವಿಜ್ಞಾನಿಗಳ ಸಹಾಯ ಅವಶ್ಯಕ ಕುರಿತು ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸಿ ವಿಷಯ ಪರಿಣಿತರನ್ನು ಕಳುಹಿಸಲಾಗುವುದು ಎಂದರು.

ರೇಷ್ಮೆ ಉದ್ಯಮ ತಿಳಿದುಕೊಳ್ಳಲು ಬಯಸಿದರೆ, ಅದಕ್ಕೆ ಅಗತ್ಯ ನೆರವು ನೀಡಲು ಭಾರತ ಸಿದ್ಧವಿದೆ. ಮುಂದಿನ ದಿನಗಳಲ್ಲಿ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶಿಬಿರಾರ್ಥಿಗಳಿಗೆ ಶುಭ ಕೋರಿದರು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕ ಡಾ.ಎಸ್.ಗಾಂಧಿದಾಸ್ ಮಾತನಾಡಿ, ವಿವಿಧ 7 ರಾಷ್ಟ್ರಗಳಿಂದ 21 ಶಿಬಿರಾರ್ಥಿಗಳು ಆಗಮಿಸಿ ಇಲ್ಲಿಯ ರೇಷ್ಮೆ ಹಾಗೂ ರೇಷ್ಮೆ ಉತ್ಪನ್ನ, ಬೆಳೆಯ ಪದ್ಧತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಎಸ್‌ಆರ್‌ಟಿಐ ತರಬೇತಿ ವಿಭಾಗದ ಮುಖ್ಯಸ್ಥರಾದ ಡಾ.ಆರ್. ಮೀನಾಲ್ ಮಾತನಾಡಿ, ಶಿಬಿರಾರ್ಥಿಗಳ ವಿವರ, ಕಾರ್ಯ ಚಟುವಟಿಕೆ ಕುರಿತು ವಿವರಿಸಿದರು. ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದಂತೆ ಐಎಸ್‌ಸಿ ಸಹಾಯಕ ಕಾರ್ಯದರ್ಶಿ ಪದ್ಮನಾಭ ನಾಯಕ್ ಮಾಹಿತಿ ಹಂಚಿಕೊಂಡರು.

ಶಿಬಿರಾರ್ಥಿಯಾದ ರೊಮೇನಿಯಾ ದೇಶದ ಡಾ.ಅಡೆಲಾ ರಮೊನ ಮೊಯಿಸ ಮಾತನಾಡಿ, ಶಿಬಿರದಲ್ಲಿ ರೇಷ್ಮೆ ಕೃಷಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆದಿದ್ದು, ಈ ಜ್ಞಾನವನ್ನು ತಮ್ಮ ರಾಷ್ಟ್ರದಲ್ಲಿ ಬಳಕೆ ಮಾಡಲಾಗುವುದು. ಈ ಶಿಬಿರ ತುಂಬಾ ಉಪಯುಕ್ತವಾಗಿದೆ ಎಂದರು.

ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಅವರು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಹಲವಾರು ತಾಂತ್ರಿಕತೆ ವಿಷಯಗಳನ್ನು ತಿಳಿಸಲಾಗಿದೆ. ಇದರ ಮೂಲಕ ತಮ್ಮ ರಾಷ್ಟ್ರದಲ್ಲಿ ರೇಷ್ಮೆ ಕೃಷಿ ಉತ್ತೇಜನ ಮಾಡುವ ಮೂಲಕ ರೈತರಿಗೆ, ದೇಶದ ಆರ್ಥಿಕತೆಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ವಿಜ್ಞಾನಿ ಡಾ.ಎಲ್.ಕುಸುಮಾ, ಡಾ.ರೇವಪ್ಪ, ಸಂಸ್ಥೆಯ ವಿಜ್ಞಾನಿಗಳು, ಅಧಿಕಾರಿಗಳು, ಸಿಬ್ಬಂದಿ, ಯೋಜನಾ ಸಹಾಯಕರು ಇದ್ದರು.