ಜಿಲ್ಲೆ

ಇಂಗ್ಲಿಷ್​ನಿಂದ ಸೊರಗಿದ ಅನ್ಯ ಭಾಷೆಗಳು

ವಿಜಯವಾಣಿ ಸುದ್ದಿಜಾಲ ಧಾರವಾಡ

ಆಂಗ್ಲ ಭಾಷೆಯಿಂದ ಕನ್ನಡ ಮಾತ್ರವಲ್ಲದೆ ದೇಶದ ಅನೇಕ ಭಾಷೆಗಳು ಸೊರಗಿವೆ. ದೇಸಿ ಭಾಷೆಯ ಉಳಿವಿಗೆ 2014ರಲ್ಲೇ ಕೇಂದ್ರ ಸರ್ಕಾರ ಸಂವಿಧಾನದ ತಿದ್ದುಪಡಿ ಮಾಡಬೇಕಿತ್ತು. ಆ ಕೆಲಸ ಆಗಲಿಲ್ಲ. ಇತ್ತ ರಾಜ್ಯ ಸರ್ಕಾರವೂ ಮುತುವರ್ಜಿ ವಹಿಸಲಿಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಜನ್ಮಸಿದ್ಧ ಹಕ್ಕು. ಆದರೆ ನಾವು ಅದನ್ನು ಕಸಿದುಕೊಳ್ಳುತ್ತಿದ್ದೇವೆ ಎಂದು ಹಿರಿಯ ಸಾಹಿತಿ ವೆಂಕಟೇಶ ಮಾಚಕನೂರ ಕಳವಳ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಭಾಷೆ-ಸಂವಹನ-ಕಲಿಕೆ ಮತ್ತು ಶಿಕ್ಷಣ ಮಾಧ್ಯಮ ಕುರಿತು ಅವರು ಮಾತನಾಡಿದರು.

2013-14ರಲ್ಲಿ 65 ಲಕ್ಷ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದರು. 2024-25ರಲ್ಲಿ 49 ಲಕ್ಷ ಮಕ್ಕಳು ಮಾತ್ರ ಇರುವುದು ದುರ್ದೈವ. ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್​ ಮಾಧ್ಯಮ ಆರಂಭಿಸಿದ್ದರಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಲಿಕೆ ಅಸ್ತವ್ಯಸ್ಥವಾಗಿದೆ. ಆಂಗ್ಲ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಕಲಿಸಲು ಶಿಕ್ಷಕರು ಇರದಿರುವುದೇ ಇದಕ್ಕೆ ಕಾರಣ. ಇಂಗ್ಲಿಷ್​ ಮಾಧ್ಯಮ ಮಕ್ಕಳಿಗೆ ಕಂಟಕವಾಗುತ್ತಿರುವುದು ಪಾಲಕರಿಗೂ ತಿಳಿಯುತ್ತಿಲ್ಲ. ಈ ಬಗ್ಗೆ ಚಿಂತಿಸಬೇಕಿದೆ. ಭಾಷಾ ಮಾಧ್ಯಮದ ಕುರಿತು ಪಾಲಕರಿಗೆ ಹಾಗೂ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಕನ್ನಡ ಸಾಹಿತ್ಯ ಕಡಿಮೆಯಾಗಿಲ್ಲ. ಆದರೆ, ಕನ್ನಡ ಶಾಲೆಗಳು ಮುಚ್ಚುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ಓದುವವರು, ಓದಿಸುವವರು ಯಾರಿದ್ದಾರೆ? ಎಂಬ ಪ್ರಶ್ನೆ ಉದ್ಭವಿಸಿದೆ. ಕನ್ನಡ ಹಿಂದಿನಂತೆ ಇಲ್ಲದಾಗಿದೆ. ಭಾಷೆಗೆ ಆಪತ್ತು ಬಂದಿದೆ ಹೊರತು, ಅಳಿವಾಗಿಲ್ಲ. ಕನ್ನಡ ಭಾಷೆ ಬೇರೆ ಬೇರೆ ಕಾರಣದಿಂದ ಸೊರಗುತ್ತಿದೆ. ಅದರ ಕಸುವು ಕಳೆದುಕೊಳ್ಳುತ್ತಿದೆ. ಅದನ್ನು ಉಳಿಸಿ ಬೆಳೆಸುವ, ಪುನಃ ಶಕ್ತಿ ತುಂಬುವ ಕೆಲಸ ನಮ್ಮೆಲ್ಲರದ್ದಾಗಿದೆ ಎಂದರು.

ಹಿರಿಯ ಸಾಹಿತಿ ಪ್ರೊ. ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಭಾ ನಿಡವಣಿ, ಡಿಡಿಪಿಯು ಪ್ರೊ. ಕೆ.ಪಿ. ಸುರೇಶ, ಎನ್​.ಎಂ. ಪಾಟೀಲ, ಗುರುರಾಜ ಸಬನಿಸ್​ ಇದ್ದರು.