ಜಿಲ್ಲೆ

ನಿರಾಶ್ರಿತರ ತಾಣದಲ್ಲೇ ವಿದೇಶಿ ಪ್ರಜೆಗಳ ಪುಂಡಾಟ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಪಾಸ್‌ಪೋರ್ಟ್ ಅವಧಿ ಮುಗಿದಿರುವ ವಿದೇಶಿ ನಿರಾಶ್ರಿತರಿಗೆ ಆಶ್ರಯ ನೀಡಿರುವ ದಿಬ್ಬೂರಿನ ಕೇಂದ್ರದಲ್ಲಿ ಕೆಲವು ವಿದೇಶಿ ಪ್ರಜೆಗಳು ಶುಕ್ರವಾರ ಪುಂಡಾಟ ನಡೆಸಿದ್ದು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ.

ವಿದೇಶಿಗರ ನಿರಾಶ್ರಿತರ ಕೇಂದ್ರದಲ್ಲಿ ಉಗಾಂಡ, ಬಾಂಗ್ಲಾದೇಶ, ನೈಜೀರಿಯ ಸೇರಿ 5 ದೇಶದ 27 ಪ್ರಜೆಗಳಿದ್ದಾರೆ. ಗ್ಯಾಸ್ ಸಿಲಿಂಡರ್ ನೀಡಲು ಹೋದ ಚಾಲಕ ಬಸವರಾಜು ಹಾಗೂ ಅಡುಗೆ ಸಹಾಯಕಿ ಲಕ್ಷ್ಮೀ ಎಂಬಾಕೆಯನ್ನು ಕೊಠಡಿಯಲ್ಲಿ ಕೂಡಿಹಾಕಿ ದಾಳಿ ನಡೆಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಜತೆಗಿದ್ದ ಪೊಲೀಸರ ಮೇಲೂ ಹಲ್ಲೆ ನಡೆದಿದ್ದು ಈ ವೇಳೆ ಪಿಎಸ್‌ಐ ಚಂದ್ರಕಲಾ, ಮಹಿಳಾ ಕಾನ್ಸ್‌ಟೇಬಲ್ ತಾಸೀನಾ ಬಾನು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಜೈಲಿಗಟ್ಟಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

" ಕಳೆದ ಎರಡು ತಿಂಗಳಿಂದ ತುಮಕೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತರ ಕೇಂದ್ರ ಆರಂಭಿಸಲಾಗಿದ್ದು 27 ವಿದೇಶಿ ಮಹಿಳಾ ಪ್ರಜೆಗಳಿದ್ದಾರೆ. ಕೇಂದ್ರದಲ್ಲಿ ಸ್ಟವ್‌ಗಳನ್ನು ಬಳಸುತ್ತಾರೆ ಎಂಬ ಮಾಹಿತಿ ಆಧಾರದ ಮೇಲೆ ಪರಿಶೀಲಿಸಲು ಪೊಲೀಸರ ಜತೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ತೆರಳಿದ್ದಾಗ ಹಲ್ಲೆಯಾಗಿದೆ. ನಾಲ್ವರು ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗುವುದು.

ರಾಹುಲ್‌ಕುಮಾರ್ ಶಹಾಪೂರವಾಡ್

ಜಿಲ್ಲಾ ಪೊಲೀಸ್ ಅಧೀಕ್ಷಕ