ಚಿಕ್ಕಮಗಳೂರು ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮಮ್ಮ ಅವರಿಗೆ ಮನವಿ ಸಲ್ಲಿಸಿದ ಎರೆಹಳ್ಳಿ ಗ್ರಾಮಸ್ಥರು ಡೆಂಘೆ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿಗಳ ತಂಡವನ್ನು ಕಳುಹಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಒತ್ತಾಯಿಸಿದರು. ಕುರುವಂಗಿ ವೆಂಕಟೇಶ್, ಅನಿಲ್‌ಕುಮಾರ್, ಸುರೇಶ್, ಮಂಜುನಾಥ್, ಜಯರಾಮ್, ಶೇಖರ್, ಕೇಶವ್, ಲೋಕೇಶ್ ಮತ್ತಿತರರಿದ್ದರು. 
ಜಿಲ್ಲೆ

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಒತ್ತಾಯ

ಚಿಕ್ಕಮಗಳೂರು: ಡೆಂಘೆ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿಗಳ ತಂಡವನ್ನು ಕಳುಹಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮಮ್ಮ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ತಾಲೂಕಿನ ಇಂದಾವರ ಗ್ರಾಪಂ ವ್ಯಾಪ್ತಿಯ ಎರೆಹಳ್ಳಿ ಗ್ರಾಮದಲ್ಲಿ ಸುಮಾರು ೪೦ಕ್ಕೂ ಹೆಚ್ಚು ಅಧಿಕ ಪರಿಶಿಷ್ಟ ವರ್ಗದವರು ವಾಸಿಸುತ್ತಿದ್ದು, ಈಚೆಗೆ ಓರ್ವ ಯುವಕ ಡೆಂಘೆಯಿಂದ ಮೃತಪಟ್ಟರೂ ಕೂಡಾ ಗ್ರಾಪಂ ಪಿಡಿಓ ಅಥವಾ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಗ್ರಾಮಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಗ್ರಾಮದಲ್ಲಿ ಸ್ವಚ್ಚತೆಯಿಲ್ಲದಿರುವ ಕಾರಣ ಪ್ರತಿ ಕುಟುಂಬದ ಮೂವರಿಗೆ ಡೆಂಘೆ ಸೋಂಕು ತಗುಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಆತಂಕ ವ್ಯಕ್ತಪಡಿಸಿದರು.
ಸ್ವಚ್ಚತೆ ಕಾಪಾಡುವ ಸಂಬಂಧ ಗ್ರಾಪಂ ಪಿಡಿಓಗೆ ಎರೆಹಳ್ಳಿ ಗ್ರಾಮಸ್ಥರು ಹಲವಾರು ಬಾರಿ ಪತ್ರಮುಖೇನ ಒತ್ತಾಯಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸೋಂಕಿನ ತೀವ್ರತೆ ಹೆಚ್ಚಳಗೊಂಡ ಪರಿಣಾಮ ಪುಟ್ಟಮಕ್ಕಳು ಅನಾರೋಗ್ಯ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಡೆಂಘೆ ಸೋಂಕು ಹರಡುವಿಕೆ ಸಂಬಂಧ ಆರೋಗ್ಯ ಇಲಾಖೆ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಮೇಲಧಿಕಾರಿಗಳು ಕೂಡಾ ನಿರ್ಲಕ್ಷ್ಯ ವಹಿಸಿರುವುದರಿಂದಾಗಿ ಸೋಂಕಿನ ತೀವ್ರತೆಯ ಇನ್ನಷ್ಟು ಹೆಚ್ಚಾಗಿ ಅನಾರೋಗ್ಯ ಪೀಡಿತ ಗ್ರಾಮವಾಗಿ ಪರಿಣಮಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೀಗಾಗಿ ಗ್ರಾಮಸ್ಥರು ಶೀಘ್ರದಲ್ಲಿ ಗುಣಮುಖರಾಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿ ವೃಂದಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅಲ್ಲದೇ ಉಳಿದಂತಹ ಗ್ರಾಮಸ್ಥರಿಗೆ ಡೆಂಘೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಂದುವೇಳೆ ಜಿಪಂ ಅಥವಾ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ರಾಜ್ಯಸರ್ಕಾರದ ವಿರುದ್ಧ ಗ್ರಾಮಸ್ಥರ ನೇತೃತ್ವದಲ್ಲಿ ಎಸ್ಸಿ ಮೋರ್ಚಾದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ.ಆರ್.ಅನಿಲ್‌ಕುಮಾರ್, ಎಸ್ಸಿ ಮೋರ್ಚಾ ಉಪಾಧ್ಯಕ್ಷ ವೈ.ಜಿ.ಸುರೇಶ್, ಮುಖಂಡ ಮಂಜುನಾಥ್, ಗ್ರಾಮಸ್ಥರಾದ ಜಯರಾಮ್, ಶೇಖರ್, ಕೇಶವ್, ಲೋಕೇಶ್, ನವೀನ್ ಮತ್ತಿತರರಿದ್ದರು.