ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಸಂಬಂಧ ಚಟುವಟಿಕೆ ಆರಂಭಿಸುವಂತೆ ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ರೈತರಿಗೆ ಸಂಬಂಧಿಸಿದಂತೆ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಹೊತ್ತು ಚರ್ಚೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಅಂತೆಯೇ ಜಿಲ್ಲೆಯ ಪ್ರಮುಖ ಗಂಭೀರ ಹಾಗೂ ಆತಂಕಕಾರಿ ವಿಷಯದ ಬಗ್ಗೆ ರಾಜ್ಯಸರ್ಕಾರ ಗಮನಹರಿಸಬೇಕೆಂದು ಆಗ್ರಹಿಸಲಾಯಿತು.
ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವುದನ್ನು ನಿಲ್ಲಿಸಿ ನಾಲ್ಕೈದು ತಿಂಗಳು ಕಳೆದಿದೆ. 2025-26ನೇ ಸಾಲಿಗೆ ಕಾರ್ಖಾನೆ ವ್ಯಾಪ್ತಿಯಲ್ಲಿ 10 ಲಕ್ಷ ಟನ್ ಕಬ್ಬು ಲಭ್ಯವಿದೆ. ಈ ಪೈಕಿ 5 ಲಕ್ಷ ಟನ್ ಒಪ್ಪಿಗೆಯಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ರೈತ ಸಭೆ ಆಯೋಜಿಸಿ ಜೂನ್ ಮೊದಲ ವಾರದಲ್ಲಿ ಕಾರ್ಖಾನೆಯನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಸಭೆಯಲ್ಲಿ ಚರ್ಚೆ ಮಾಡಿ ಎರಡು ತಿಂಗಳಾಗಿದೆ. ಆದರೆ ಕಾರ್ಖಾನೆಯನ್ನು ಪ್ರಾರಂಭಿಸುವ ಯಾವ ಸೂಚನೆಯು ಕಂಡುಬರುತ್ತಿಲ್ಲ. ಇದು ಕಬ್ಬು ಬೆಳೆಗಾರರು ಹಾಗೂ ಹೋರಾಟಗಾರರಿಗೆ ಆಂತಕವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರಕ್ಕೆ ಮೈಷುಗರ್ ಕಾರ್ಖಾನೆಯೇ ಮೊದಲ ಆದ್ಯತೆ ಹಾಗೂ ಪ್ರಮುಖ ವಿಷಯವಾಗಬೇಕು. ಈ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿಯೇ ಉಳಿಸಲು 3 ವರ್ಷ ನಿರಂತರ ಹೋರಟ ಮಾಡಲಾಗಿದೆ. ಜಿಲ್ಲೆಯ ರೈತರು, ಸಾರ್ವಜನಿಕರು ಸೇರಿದಂತೆ 75 ಪ್ರಮುಖ ಸಂಘಟನೆಗಳು ದೀರ್ಘಕಾಲ ಶ್ರಮಿಸಿವೆ. ಮಾತ್ರವಲ್ಲದೆ ಹತ್ತಾರೂ ದಿನ ಧರಣಿ ಸತ್ಯಾಗ್ರಹ ಮಾಡಲಾಗಿದೆ. ಜತೆಗೆ ಎರಡು ಸದನಗಳಲ್ಲೂ ಸಹ ವ್ಯಾಪಕ ಚರ್ಚೆಯಾಗಿದೆ. ಇದಕ್ಕೆ ಪೂರಕವಗಿ ರಾಜ್ಯ ಸರ್ಕಾರ ಕಟ್ಟುಬದ್ದತೆಯಿಂದ ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿ ಉಳಿಸಿಕೊಳ್ಳಲು ಸಾರ್ವಜನಿಕ ವಚನ ಮಾಡಿದೆ. ಆದರೆ 2025-26ನೇ ಸಾಲಿಗೆ ಕಾರ್ಖಾನೆಯನ್ನು ಪ್ರಾರಂಭಿಸುವ ಯಾವ ಚಟುವಟಿಕೆ ಇನ್ನು ಪ್ರಾರಂಭ ಮಾಡಿಲ್ಲ. ಸಿದ್ದತೆಗಳು ನಡೆಯುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ನಿರಂತರ ಮನವಿ ಸಲ್ಲಿಸಿದ್ದರು ಗಮನ ಕೊಡುತ್ತಿಲ್ಲ. ಕಬ್ಬು ಕಟಾವು ಮಾಡುವ ಕಾರ್ಮಿಕರ ನೇಮಕ, ಕಾರ್ಖಾನೆ ಯಂತ್ರಗಳ ಸಿದ್ಧತೆ ನಡೆದಿಲ್ಲ. ಈ ನಡುವೆ ಖಾಸಗಿ ಕಂಪನಿ ಹಾಗೂ ವ್ಯಕ್ತಿಗಳು ಕಾರ್ಖಾನೆಯನ್ನು ಕಬಳಿಸುವ ಹುನ್ನಾರ ಇನ್ನು ನಿಂತಿಲ್ಲ. ಆದ್ದರಿಂದ ಇದಕ್ಕೆ ಆಸ್ಪದ ಕೊಡಬಾರದೆಂದು ಎಚ್ಚರಿಕೆ ನೀಡಿದರು.
ಇದಲ್ಲದೆ ರಾಜ್ಯಸರ್ಕಾರ ಬೆಂಗಳೂರಿಗಾಗಿ ಮಂಡ್ಯ ಜಿಲ್ಲೆಯನ್ನು ದಿವಾಳಿ ಮಾಡುತ್ತಿದೆ. ಇದನ್ನು ಮೊದಲು ನಿಲ್ಲಿಸಬೇಕು. ಆರನೇ ಕುಡಿಯುವ ನೀರಿನ ಯೋಜನೆಗೆ ವಿರೋಧ ಮಾಡಲಾಗಿದೆ. ಆದಾಗ್ಯೂ ಸರ್ಕಾರ ಯೋಜನೆ ಬಗ್ಗೆ ಆಸಕ್ತಿ ತೋರುತ್ತಿದೆ. ಕೆಆರ್‌ಎಸ್ ಅಣೆಕಟ್ಟಿನ ನೀರು ಸಂಪೂರ್ಣ ರೈತರ ಹಕ್ಕು. ಡ್ಯಾಂ ಬಗ್ಗೆ ಯಾವುದೇ ರೀತಿಯ ಮನರಂಜನಾ ಕಾರ್ಯಗಳು, ಜನವಸತಿ, ವ್ಯಾಪಾರ, ವ್ಯವಹಾರ ನಿಷೇಧವಾಗಬೇಕು. ಈ ಸಂಬಂಧ ಯಾವುದೇ ಹೊಸ ಯೋಜನೆಗೆ ಅವಕಾಶ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರು ರೈತರ ಸಭೆ ಕರೆದು ಚರ್ಚೆ ಮಾಡಬೇಕೆಂದು ಆಗ್ರಹಿಸಿದರು.
ರೈತರ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್, ರೈತ ಸಂಘ(ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ಇಂಡುವಾಡು ಚಂದ್ರಶೇಖರ್, ಮುದ್ದೇಗೌಡ, ಫಯಾಜ್, ದಸಂಸ ಕೃಷ್ಣ, ಶಿವಲಿಂಗಯ್ಯ, ದೇವೇಗೌಡ, ಕುಮಾರ್, ಕಮಲಮ್ಮ, ದೇವಿರಮ್ಮ ಇತರರಿದ್ದರು.