ಚಿಕ್ಕಮಗಳೂರು ಶಿರಸ್ತೆದಾರ್ ಮನು ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಕೊಪ್ಪ ತಾಲೂಕು ಕೆಲಕುಳ್ಳಿ ಗ್ರಾಮದ ರೈತರು ತಮ್ಮ ಜಮೀನನ್ನ ಪಕ್ಕಾಪೋಡಿ ಮಾಡಿ ಕಲ್ಲುಬಾಂದು ತೋರಿಸಿಕೊಡುವಂತೆ ಒತ್ತಾಯಿಸಿದರು. ಶ್ರೀಕಾಂತ್, ಡಿ.ರಾಮು, ಮಹೇಂದ್ರ ಸ್ವಾಮಿ, ಹೆಬ್ಬೂರು ಶಿವಣ್ಣ, ಜಾರ್ಜ್ ಮತ್ತಿತರರಿದ್ದರು. 
ಜಿಲ್ಲೆ

ಜಮೀನಿಗೆ ಪಕ್ಕಾಪೋಡಿ, ಕಲ್ಲುಬಾಂದು ತೋರಿಸಿಕೊಡಲು ಒತ್ತಾಯ

ಚಿಕ್ಕಮಗಳೂರು: ಕೊಪ್ಪ ತಾಲೂಕು ಕಸಬಾ ಹೋಬಳಿಯ ಕೆಲುಕುಳ್ಳಿ ಗ್ರಾಮದ ಸರ್ವೇ ನಂ. ೬೧ರಲ್ಲಿ ಸಿದ್ದಯ್ಯ, ಬಡಿಯಯ್ಯ, ಪರಮೇಶ್ವರ ಹಾಗೂ ಸುಬ್ಬಯ್ಯ ಎಂಬುವರಿಗೆ ೧೯೭೮ರಲ್ಲಿಯೇ ತಲಾ ನಾಲ್ಕು ಎಕರೆ ಜಮೀನು ಮಂಜೂರಾಗಿದ್ದು, ಈ ಜಮೀನಿನ ಪಕ್ಕಾಪೋಡಿ ದುರಸ್ಥಿ ಕಾರ್ಯ ನಡೆಸಿ ಕಲ್ಲುಬಾಂದು ತೋರಿಸಿಕೊಡಬೇಕು ಎಂದು ಜಮೀನಿನ ಮಾಲೀಕರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಶಿರಸ್ತೆದಾರ್ ಮನು ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್, ಕೆಲುಕುಳ್ಳಿ ಗ್ರಾಮದ ಮೂಲ ನಿವಾಸಿಗಳಾದ ಫಲಾನುಭವಿಗಳಿಗೆ ಕ್ರಮವಾಗಿ ಹಕ್ಕು ಬದಲಾವಣೆಯಾಗಿ ಆರ್‌ಟಿಸಿ, ಪಹಣಿ, ಖಾತೆಗಳು ಹೊಂದಿವೆ. ಅಲ್ಲದೇ ಜಮೀನಿನ ತೆರಿಗೆ ಕಂದಾಯವನ್ನು ವಾರಸುದಾರರು ಪಾವತಿಸಿಕೊಂಡು ಬಂದಿದ್ದಾರೆ ಎಂದರು.
ಜಮೀನಿನ ಮೂಲ ಮಂಜೂರುದಾರರು ಮೃತರಾದ ಹಿನ್ನೆಲೆಯಲ್ಲಿ ಕುಟುಂಬದ ವಾರಸುದಾರರು ಅವರವರ ಪೂರ್ವಜರ ಸ್ವತ್ತುಗಳನ್ನು ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಹಾಗೂ ಆರ್ಥಿಕ ಭದ್ರತೆಗೆ ನೆರವು ಕಲ್ಪಿಸಿಕೊಂಡಿದ್ದಾರೆ. ಇದೀಗ ವಾರಸುದಾರರ ಸೊತ್ತುಗಳನ್ನು ಭದ್ರತೆ, ಅಭಿವೃದ್ದಿ, ಕೃಷಿ ಚಟುವಟಿಕೆ ಹಾಗೂ ಇತ್ಯಾದಿ ಕ್ರಮಗಳಿಗೆ ಸೊತ್ತುಗಳನ್ನು ಪಕ್ಕಾಪೋಡಿ ದುರಸ್ತಿಯಾಗದೇ, ನಕ್ಷೆಯಲ್ಲಿ ಇಲ್ಲದಿರುವ ಕಾರಣ ತೀವ್ರ ತೊಂದರೆಯಗಿದೆ. ಫಲಾನುಭವಿಗಳಾದ ವಾರಸುದಾರರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾದ ಹಿನ್ನೆಲೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕೂಡಲೇ ಜಿಲ್ಲಾಡಳಿತವು ಜಮೀನನ್ನು ಪಕ್ಕಾಪೋಡಿ ಕಾರ್ಯನಡೆಸಿ ಕಲ್ಲುಬಾಂದು ತೋರಿಸಿಕೊಡಲು ಸಂಬAಧಿಸಿದ ಅಧಿಕಾರಿಗಳಿಗೆ ಆದೇಶ ಮತ್ತು ನಿರ್ದೇಶನವನ್ನು ಹೊರಡಿಸುವ ಮೂಲಕ ವಾರಸುದಾರರ ಸ್ವಾಧೀನಾನುಭವಕ್ಕೆ ತಕ್ಕಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಮಹೇಂದ್ರಸ್ವಾಮಿ, ಹೆಬ್ಬೂರು ಶಿವಣ್ಣ, ಶೃಂಗೇರಿ ಕಾರ್ಯದರ್ಶಿ ಜಾರ್ಜ್, ಕೊಪ್ಪ ಸಂಘಟನಾ ಕಾರ್ಯದರ್ಶಿ ರವಿಕೆಸವೆ, ಕಡೂರು ಸಂಘಟನಾ ಕಾರ್ಯದರ್ಶಿ ಕೆ.ಡಿ.ರವಿ, ಮುಖಂಡರಾದ ಕೃಷ್ಣಮೂರ್ತಿ, ಪ್ರಶಾಂತ್, ಅರುಣಾಕ್ಷಿ ಮತ್ತಿತರರಿದ್ದರು.