ಹುನಗುಂದ ಪಟ್ಟಣದ ಕೆಬಿಜೆಎನ್‌ಎಲ್ ಕಚೇರಿಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಬಿ.ಕಿತ್ತೂರ ಅವರಿಗೆ ಸಮಸ್ಯೆ ವಿವರಿಸಿದರು. ರೈತರಾದ ಬಸವರಾಜ ಚಿತ್ತರಗಿ, ಸಂಗಪ್ಪ ಇದ್ದಲಗಿ, ಮಹಾಂತೇಶ ಪಲ್ಲೇದ, ದೊಡ್ಡಬಸು ಗೌಡರ ಇತರರಿದ್ದರು. 
ಜಿಲ್ಲೆ

ಕಾಲುವೆಗೆ ನೀರು ಬಿಡುವಂತೆ ಒತ್ತಾಯ

ದತ್ತಾತ್ರೇಯ ಪಿ ಕುಲಕರ್ಣಿ

ಹುನಗುಂದ: ಮರೋಳ ಏತ ನೀರಾವರಿಯ ಪೂರ್ವ ಭಾಗದ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬೂದಿಹಾಳ, ನಿಡಸನೂರ, ತೂರಮರಿ, ಹೇಮವಾಡಗಿ ಗ್ರಾಮದ ರೈತರು ಹುನಗುಂದ ಪಟ್ಟಣದ ಕೆಬಿಜೆಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಬೂದಿಹಾಳ ಗ್ರಾಮದ ರೈತ ಮುಖಂಡ ಬಸವರಾಜ ಚಿತ್ತರಗಿ ಮಾತನಾಡಿ, ಕಾಲುವೆ ನೀರನ್ನೇ ಆಶ್ರಯಿಸಿರುವ ರೈತರು ಮೆಣಸಿನಕಾಯಿ, ಗೋವಿನಜೋಳ, ಸೂರ್ಯಕಾಂತಿ, ಈರುಳ್ಳಿ ಬಿತ್ತನೆ ಮಾಡಿದ್ದಾರೆ. ನೀರನ್ನು ಹರಿಸದ ಕಾರಣ ಬಿತ್ತನೆ ಮಾಡಿದ್ದ ಬೆಳೆ ಸಂಪೂರ್ಣ ಹಾಳಾಗುತ್ತಿವೆ. ಕೆಲವು ಭಾಗದ ರೈತರ ಜಮೀನುಗಳಿಗೆ ನೀರು ಬರುತ್ತಿದ್ದು ನಮ್ಮ ಭಾಗಕ್ಕೆ ನೀರು ಬರುತ್ತಿಲ್ಲ ಏಕೆ ? ರೈತರ ಜತೆಗೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಬಿಜೆಎನ್‌ಎಲ್ ಕಚೇರಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷೃದಿಂದಾಗಿ 5 ವರ್ಷಗಳಿಂದ ಕಾಲುವೆಗಳಲ್ಲಿ ಬೆಳೆದ ಗಿಡಗಳು ಹಾಗೂ ಹೂಳು ಸ್ವಚ್ಛ ಮಾಡದ್ದರಿಂದ ನೀರು ಮುಂದೆ ಹರಿಯುತ್ತಿಲ್ಲ. ಆದರೆ ಅಧಿಕಾರಿಗಳು ಕಾಲುವೆ ಸ್ವಚ್ಛ ಮಾಡಲಾಗಿದೆ ಎಂದು ಬೋಗಸ್ ಬಿಲ್ ತೆಗೆದಿದ್ದಾರೆ ಎಂದು ರೈತರು ಆರೋಪಿಸಿದರು.

ರೈತರಾದ ಸಂಗಪ್ಪ ಇದ್ದಲಗಿ, ಮಹಾಂತೇಶ ಪಲ್ಲೇದ, ದೊಡ್ಡಬಸು ಗೌಡರ, ಜಗದೀಶ ತೋಡದ, ಬಸಪ್ಪ ಚಿತ್ತರಗಿ, ಹುಸೇನಪ್ಪ ಮಾದರ, ಕನಕಪ್ಪ ಮಾದರ, ತಿಮ್ಮನಗೌಡ ಗೌಡರ, ಯಮನೂರ ನಾರಗಲ್ಲ, ಮಹಾಂತೇಶ ಬೆಳ್ಳಿಹಾಳ ಇತರರಿದ್ದರು.