ಎನ್.ಆರ್.ಪುರದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದ ರೈತರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಭತ್ತದ ಬೀಜದ ದರ ಇಳಿಕೆಗೆ ಒತ್ತಾಯ

ಎನ್.ಆರ್.ಪುರ: ಭತ್ತದ ಬೀಜದ ಧಾರಣೆ ಏರಿಕೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದ್ದು, ಸರ್ಕಾರ ಭತ್ತದ ಬೀಜದ ಧಾರಣೆ ಇಳಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ನೀಲೇಶ್ ಸರ್ಕಾರವನ್ನು ಆಗ್ರಹಿಸಿದರು.
ಕೃಷಿ ಇಲಾಖೆ ಆವರದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿ, ಕೆಲವು ಅಧಿಕಾರಿಗಳು ಕೃಷಿಕ ಸಮಾಜದ ಸಭೆಗೆ ಗೈರಾಗಿದ್ದಾರೆ. ಸಭೆ ಬಗ್ಗೆ 8 ದಿನದ ಮುಂಚೆಯೇ ಮಾಹಿತಿ ನೀಡಿದರೂ ಬಂದಿಲ್ಲ . ಅವರಿಗೆ ಕಾರಣ ಕೇಳಿ ನೋಟೀಸ್ ನೀಡಬೇಕು ತಾಲೂಕು ಕೃಷಿಕ ಸಮಾಜದ ಸದಸ್ಯ ಕಾರ್ಯದರ್ಶಿ ಮಹೇಶ್‌ಗೆ ಸೂಚಿಸಿದರು. ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಆದ ನಡಾವಳಿಯನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಕಳಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.
ಸಹಾಯಕ ತೋಟಗಾರಿಕೆ ನಿರ್ದೇಶಕ ರೋಹಿತ್ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಜೇನು ಪೆಟ್ಟಿಗೆ, ಜೇನು ಹುಳ ಹಾಗೂ ಸ್ಯಾಂಡ್‌ಗೆ ಸಹಾಯ ಧನ ನೀಡಲಾಗುತ್ತಿದೆ. ಪ್ಯಾಕಿಂಗ್ ಹೌಸ್‌ಗೆ ಸಹಾಯ ಧನ ನೀಡಲಾಗುವುದು. 25 ಲಕ್ಷ ರೂ.ವೆಚ್ಚದ ಅಡಿಕೆ ಸಂಸ್ಕೃರಣಾ ಘಟಕ ಮಾಡುವ ಅಡಕೆ ಬೆಳೆಗಾರರಿಗೆ 10 ಲಕ್ಷ ಸಾಲ ನೀಡುತ್ತೇವೆ. ಅಡಿಕೆ ಸುಲಿಯವ ಯಂತ್ರ ಹಾಗೂ ಹನಿ ನೀರಾವರಿಗೆ ಸಬ್ಸಿಡಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ಈ ಹಿಂದೆ ತೋಟಗಾರಿಕೆ ಇಲಾಖೆ ಮೈಲುತುತ್ತ ನೀಡಿತ್ತು. ಈಗ ನಿಂತು ಹೋಗಿದೆ. ಈಗ ಮತ್ತೆ ಮೈಲುತುತ್ತ ನೀಡಬೇಕು. ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಗ್ರಾಮ ಸಭೆಯಲ್ಲಿ ತಿಳಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಪ್ರಶಾಂತ್.ಎಲ್.ಶೆಟ್ಟಿ, ನಿರ್ದೇಶಕರಾದ ಪಿ.ಕೆ.ಬಸವರಾಜಪ್ಪ,ಎಚ್.ಎನ್. ರವಿಶಂಕರ್, ವೈ.ಎಸ್.ಸುಬ್ರಹ್ಮಣ್ಯ, ನಾಗರಾಜ ಶಟ್ಟಿ, ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಇದ್ದರು.