ಲಕ್ಷ್ಮೇಶ್ವರ ತಾಲೂಕು ಹರದಗಟ್ಟಿ ಗ್ರಾಮದಲ್ಲಿ ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು 
ಜಿಲ್ಲೆ

ಬಸ್ ಸಂಚಾರ ತಡೆದು ವಿದ್ಯಾರ್ಥಿಗಳ ಆಕ್ರೋಶ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಸಮೀಪದ ಹರದಗಟ್ಟಿ ಗ್ರಾಮದಿಂದ ಸರಿಯಾದ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

ನಮಗ ಶಾಲಿಗೆ ಹೋಗಾಗ ಸರಿಯಾಗಿ ಬಸ್ ಇಲ್ರಿ, ನಾವು ಶಾಲಿಗೆ ಹೋಗದ್ರಾಗ ಕ್ಲಾಸ್ ಸುರು ಆಗಿದ್ದರಿಂದ ಸರ್ ಕಡೆಯಿಂದ ದಿನ ಶಿಕ್ಷೆ ಅನುಭವಿಸಬೇಕ್ರಿ, ಅಲ್ಲದ ಅಭ್ಯಾಸ ಹಿಂದು ಉಳಿಯುವಂತೆ ಆಗೈತ್ರಿ, ನಮಗ ಸರಿಯಾದ ಬಸ್ ಬಿಡದಿದ್ರ ಇವತ್ತ ಯಾವುದೂ ಬಸ್ ಬಿಡುದಿಲ್ಲ, ನಮಗ ಅನೂಕೂಲ ಮಾಡಿ ಕೊಡ್ರಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಬಸ್‌ನಲ್ಲಿನ ಜನರನ್ನು ಕೆಳಗೆ ಇಳಿಸಿ ಬಸ್‌ನಲ್ಲಿ ಹತ್ತಿ ಕುಳಿತು ಬಸ್ ಬಿಡದಂತೆ 3 ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟಿಸಿದರು.

ನಿತ್ಯ ನೂರಾರು ಜನರು ಹಾಗೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ, ವ್ಯಾಪಾರ ವಹಿವಾಟು ಸೇರಿದಂತೆ ಹಲವಾರು ಕೆಲಸಗಳಿಗೆ ಪಟ್ಟಣಕ್ಕೆ ಹೋಗಿ ಬರುತ್ತಿದ್ದಾರೆ. ಆದರೆ ಬಸ್‌ಗಳ ಸೌಲಭ್ಯ ಸರಿಯಾಗಿಲ್ಲ. ಶಾಲಾ ಅವಧಿಗೆ ಬಸ್‌ಗಳು ಇಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಸಮರ್ಪಕವಾಗಿ ಬಸ್ ಸೌಲಭ್ಯ ನೀಡುವಂತೆ ಕೇಳುತ್ತಿದ್ದರೂ ಇಲ್ಲಿಯವರೆಗೂ ಸರಿಯಾಗಿಲ್ಲ. ಅದಕ್ಕಾಗಿ ಪ್ರತಿಭಟನೆಯ ಹಾದಿಯನ್ನು ಮಕ್ಕಳು ಹಿಡಿಯುವಂತಾಗಿದೆ ಎಂದು ಹಿರಿಯರು ಆರೋಪಿಸಿದರು.

ನಂತರ ಜನರು ವಿದ್ಯಾರ್ಥಿಗಳ ಮನವೊಲಿಸಿ ಬಸ್‌ಗಳನ್ನು ಬಿಡಿಸುವಲ್ಲಿ ಸಫಲರಾದರು. ಲಕ್ಷ್ಮಣ ಲಮಾಣಿ, ನಾನಪ್ಪ ಲಮಾಣಿ, ಸೋಮಪ್ಪ ಲಮಾಣಿ, ರಮೇಶ ಲಮಾಣಿ, ತಿಪ್ಪಣ್ಣ ಲಮಾಣಿ, ರಾಹುಲ್ ಲಮಾಣಿ, ಕುಮಾರ ಲಮಾಣಿ, ಇತರರಿದ್ದರು.