ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಪಂ ವ್ಯಾಪ್ತಿಯ ಹಂತೂರು ಗ್ರಾಮದ ಸರ್ವೇ ನಂಬರ್ ೫೫ರ ಸರ್ಕಾರಿ ಗೋಮಾಳ ಜಾಗದಲ್ಲಿ ಸುಮಾರು ೨೧ ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಅಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಒದಗಿಸಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಹಂತೂರು ಗ್ರಾಮಸ್ಥರು ಡಿಎಸ್‌ಎಸ್ ನೇತೃತ್ವದಲ್ಲಿ ಶಿರಸ್ತೇದಾರ್ ಮನು ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಸ್ಥಳೀಯ ಆಡಳಿತ ನಿರಾಶ್ರಿತರಿಗೆ ಮೂಲ ಸೌಕರ್ಯ ಒದಗಿಸದೆ ಸತಾಯಿಸುತ್ತಿದೆ. ನಿವೇಶನ ರಹಿತರಿಗೆ ಗ್ರಾಪಂ ವಸತಿ ರಹಿತರ ಪಟ್ಟಿಯಲ್ಲಿ ಹಾಗೂ ರಾಜ್ಯ ವಸತಿ ನಿಗಮ ಪಟ್ಟಿಯಲ್ಲಿ ಹೆಸರು ನಮೂದಾಗಿವೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ನಿವೇಶನ ಕಲ್ಪಿಸಿಲ್ಲ. ಜೊತೆಗೆ ಕುಡಿಯುವ ನೀರನ್ನೂ ಒದಗಿಸುತ್ತಿಲ್ಲ ಎಂದು ದೂರಿದರು.
ಗುಡಿಸಲು ನಿರ್ಮಿಸಿರುವ ಗ್ರಾಮಸ್ಥರು ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಅದೇ ಸರ್ವೆ ನಂಬರಿನಲ್ಲಿ ವಾಸಿಸುತ್ತಿದ್ದು, ವಿದ್ಯುತ್ ದೀಪ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೆರಳಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ ಪರಿತಪಿಸುವಂತಾಗಿದೆ. ಆಕಸ್ಮಿಕವಾಗಿ ಅನಾರೋಗ್ಯ ಉಂಟಾದಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲು ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೇಶನ ರಹಿತರಿಗೆ ನಿವೇಶನ ಹಾಗೂ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಶಾಸಕಿ ನಯನ ಮೋಟಮ್ಮ ಹಾಗೂ ಸ್ಥಳೀಯ ಆಡಳಿತಕ್ಕೆ ಹಲವಾರು ಮನವಿ ಸಲ್ಲಿಸಿದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಹಂತೂರು ಗ್ರಾಮದ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡುವ ಜೊತೆಗೆ ಮೂಲ ಭೂತ ಸೌಕರ್ಯವನ್ನು ತ್ವರಿತಗತಿಯಲ್ಲಿ ಪೂರೈಸಿ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ತಾಲೂಕು ಸಂಚಾಲಕ ಸಂತೋಷ್, ಗ್ರಾಮಸ್ಥರಾದ ಉಮೇಶ್, ರುಕ್ಮಿಣಿ, ರಾಜು, ಅಜಿತ್‌ಕುಮಾರ್, ದೇವರಾಜು, ರಾಜೇಶ್, ಎಸ್.ಸತೀಶ್, ರತ್ನ, ಪ್ರೇಮಾ ಮತ್ತಿತರರಿದ್ದರು.