ಬಳ್ಳಾರಿ : ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ನಷ್ಟವಾಗಿದ್ದು, ಅದರ ಪರಿಹಾರವನ್ನು ಸರ್ಕಾರ ಕೂಡಲೇ ನೀಡುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ (ಬಳ್ಳಾರಿ ಜಿಲ್ಲಾ ಸಮಿತಿ) ಮತ್ತು ಕೆಪಿಆರ್‌ಎಸ್ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೆಪಿಆರ್‌ಎಸ್ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ್ ಮಾತನಾಡಿ, ರಾಜ್ಯದಲ್ಲಿ ಈ ವರ್ಷ ಮುಂಗಾರು ತಡವಾಗಿ ಪ್ರವೇಶ ಮಾಡಿತು. ತಡವಾದರೂ ಸಹಿತ ಬಹುತೇಕ ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದರೂ ಮಳೆಯಿಲ್ಲದೆ ಬೆಳೆ ನಷ್ಟವಾಯಿತು. ಕೆಲವೆಡೆ ಮತ್ತೊಮ್ಮೆ ಬಿತ್ತನೆ ಮಾಡಿಯೂ ಕೂಡ ಮಳೆಗಾಗಿ ರೈತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಮುಂಗಾರು ಮಳೆ ಕ್ಷೀಣವಾಗುತ್ತಿದ್ದು ಬಿತ್ತಿದ ಬೆಳೆಯು ಒಣಗುತ್ತಿದ್ದು , ಸಾಲ ಮಾಡಿ ಬಿತ್ತನೆಗೆ ಖರ್ಚು ಮಾಡಿದ ಹಣ ವಾಪಸ್ ಬರುವಂತೆ ಕಾಣುತ್ತಿಲ್ಲ, ರೈತರು ಕಂಗಾಲಾಗುತ್ತಿದ್ದಾರೆ ಎಂದರು.
ಕೃಷಿ ಚಟುವಟಿಕೆ ಸಾಲ ಮಾಡದೆ ನಡೆಯುವುದೇ ಇಲ್ಲ, ಬೀಜ, ಗೊಬ್ಬರ ಇನ್ನಿತರ ಬೆಲೆ ಗಗನಕ್ಕೆ ಏರಿದೆ. ಇದನ್ನೆಲ್ಲ ಸರಿದೂಗಿಸಲು ರೈತರು ಹೆಚ್ಚಿನ ಸಾಲಕ್ಕೆ ಮೊರೆಹೋಗಿದ್ದಾರೆ. ಇನ್ನೊಂದೆಡೆ ಮುಂಗಾರು ಮಳೆ ವೈಫಲ್ಯದಿಂದ 2022-23 ರ ಸಾಲಿನಲ್ಲಿ 76 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇಂದಿನ ಕೃಷಿ ಬಿಕ್ಕಟ್ಟಿಗೆ ಹಿಡಿದ ಕನ್ನಡಿಯಾಗಿದೆ. ಇಷ್ಟೆಲ್ಲ ಆದರೂ ಸರ್ಕಾರ ಎಚ್ಚೆತ್ತುಕೊಳ್ಳದೆ, ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಕೆಕೆಎಂಎಸ್ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ದೇಶದ ಬೆನ್ನೆಲುಬು ಆಗಿರುವ ರೈತನ ಬೆನ್ನೆಲುಬನ್ನೇ ಮುರಿಯುತ್ತಿದೆ. ದೇಶದ ಪ್ರಗತಿ ರೈತನ ಬದುಕಿನ ಮೇಲೆ ನಿಂತಿದೆ. ಹಾಗಾಗಿ ಈ ಕೂಡಲೇ ಸರ್ಕಾರ ಯುದ್ದೋಪಾದಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಇಂತಹ ಪರಿಸ್ಥಿತಿಯಲ್ಲಿ ದೇಶದ ರೈತರು ಸರ್ಕಾರದ ಸಹಾಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಕೃಷಿ ಕಾರ್ಮಿಕರು, ನರೇಗಾ ಕೂಲಿ ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ. ನರೇಗಾ ಕೂಲಿ ಕಾರ್ಮಿಕರಿಗೆ ದುಡಿದ ಹಣವು ಕೈ ಸೇರುತ್ತಿಲ್ಲ, ದಿನ ಕೂಲಿ ಮೇಲೆ ಜೀವನಮಾಡುವ ಕೋಟ್ಯಂತರ ನರೇಗಾ ಕೂಲಿ ಕಾರ್ಮಿಕರ ಬದುಕು ಹೇಳತೀರದು. ಕೆಲವೆಡೆ 2 ತಿಂಗಳ ಹಣ ಬಾಕಿ ಇದೆ. ಇನ್ನು ಕೆಲವು ಕಡೆ ಸಮರ್ಪಕವಾಗಿ ಕೆಲಸವನ್ನು ನೀಡುತ್ತಿಲ್ಲ.ಇಂತಹ ಬರ ಪರಿಸ್ಥಿತಿಯಲ್ಲಿ ರೈತರು, ಕೃಷಿ ಕಾರ್ಮಿಕರು 50 ಮಾನವ ದಿನ ಹೆಚ್ಚಿಗೆ ಕೆಲಸ ನೀಡಬೇಕೆಂದು ಕೇಳುತ್ತಿದ್ದರು ಸಹ ಸರ್ಕಾರ ಹೆಚ್ಚುವರಿ 50 ದಿನ ಕೆಲಸ ನೀಡಿಲ್ಲ ಎಂದರು.
ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಸಂಪೂರ್ಣವಾಗಿ ವಿಫಲವಾಗಿದೆ. ರೈತ ಕೃಷಿ ಕಾರ್ಮಿಕರ ಬದುಕು ಬೀದಿಗೆ ಬರುವಂತಾಗಿದೆ. ಈ ಎಲ್ಲ ಸಮಸ್ಯೆಗಳ ಕಾರಣದಿಂದಾಗಿ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತ, ಕೃಷಿ ಕಾರ್ಮಿಕರ ಕಷ್ಟಗಳ ಪರಿಹಾರಕ್ಕಾಗಿ ನಷ್ಟ ಪರಿಹಾರವನ್ನು ಸರ್ಕಾರ ಈ ಕೂಡಲೇ ಘೋಷಿಸಿ, ಯುದ್ದೋಪಾದಿಯಲ್ಲಿ ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಅಸುಂಡಿ ಲೇಪಾಕ್ಷಿ, ಗೋವಿಂದ್, ಸುರೇಂದ್ರ, ಉಜ್ಜನಯ್ಯ ಸ್ವಾಮಿ, ಈಶ್ವರಪ್ಪ, ಬಸವರಾಜ ಕೇರಿಕೆರೆ, ಬಸವರಾಜ್ ಸ್ವಾಮಿ, ನಿಂಗಪ್ಪ, ಈರಣ್ಣ ಹರಗಿನ ಡೋಣಿ, ಮಾಬುಸಾಬ್, ಬಸಣ್ಣ, ಖಾದರ್ ಬಾಷ, ಉಮಾಪತಿ ಗೌಡ, ಧನರಾಜ್, ಯೋಗರಾಜ್, ಶೆಕ್ಷಾವಲಿ ಸೇರಿದಂತೆ ಇತರರು ಇದ್ದರು.