ಹುಬ್ಬಳ್ಳಿ: ಪಶುಪಾಲಕರು ಮತ್ತು ಕುರಿಗಾರರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ತಡೆಯಲು ಪಶುಪಾಲಕರ ಮತ್ತು ಕುರಿಗಾರರ ಹಿತರಕ್ಷಣೆ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಕುರುಬ ಸಮಾಜದ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ನೂರಾರು ಕುರಿಗಳನ್ನು ಸೇರಿಸಿ ಪ್ರತಿಭಟನೆ ನಡೆಸಲಾಯಿತು.
ಗುಡ್ಡಗಾಡಿನಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆ ಅಧಿಕಾರಿಗಳಿಂದ ನಿರಂತರವಾಗಿ ಕಿರುಕುಳ, ದೌರ್ಜನ್ಯ ನಡೆಯುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಿಂದಲೂ ಬೆಟ್ಟಗುಡ್ಡಗಳಲ್ಲಿ ಪಶು ಸಂಗೋಪನೆ ಮತ್ತು ಕುರಿಗಾರಿಕೆ ಮಾಡಿಕೊಂಡು ಬಂದಿರುವ ಜನರಿಗೆ ಆಯಾ ಪ್ರದೇಶದಲ್ಲಿಂದು ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರವು ಪಶು ಸಂಗೋಪನೆ ಮತ್ತು ಕುರಿ ಕಾಯುವ, ಪಶುಪಾಲಕರ ಮತ್ತು ಕುರಿಗಾರರ ರಕ್ಷಣೆಗಾಗಿ ಪಶುಪಾಲಕರ ಮತ್ತು ಕುರಿಗಾರರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.
ಒಕ್ಕೂಟದ ರಾಜ್ಯಾಧ್ಯಕ್ಷ ಸಿದ್ದು ತೇಜಿ, ಸಂಚಾಲಕರಾದ ರವಿರಾಜ ಕಂಬಳಿ, ಯಲ್ಲಪ್ಪ ಹೆಗಡೆ ಇತರರು ಉಪಸ್ಥಿತರಿದ್ದರು.