ಮುಂಡರಗಿ: ಖಾಸಗಿ ಕಂಪನಿಯೊಂದರಿಂದ ಸೂರ್ಯಕಾಂತಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದ ಬೆಳೆಯೆಲ್ಲವೂ ನಾಶವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಹಾರೋಗೇರಿ ಗ್ರಾಮದ ರೈತರು ಮಂಗಳವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಖಾಸಗಿ ಕಂಪನಿಯಿಂದ ಸೂರ್ಯಕಾಂತಿ ಬಿತ್ತನೆ ಬೀಜ ಖರೀದಿಸಿದ ಹಾರೋಗೇರಿ ಭಾಗದ ಜಮೀನುಗಳಲ್ಲಿ ನೂರಾರು ರೈತರು ಬಿತ್ತನೆ ಮಾಡಿದ್ದರು. ಆದರೆ, ಕಳಪೆ ಬೀಜದಿಂದಾಗಿ ಬೆಳೆಯಲ್ಲ ಸಂಪೂರ್ಣ ಹಾನಿಗೀಡಾಗಿದೆ. ಮೊದಲೇ ಬರಗಾಲವಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಈ ಬಗ್ಗೆ ತಾವು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಗ್ರೇಡ್-2 ತಹಸೀಲ್ದಾರ್ ಕೆ. ರಾಧಾ ಮನವಿ ಸ್ವೀಕರಿಸಿದರು. ಬಸವರಾಜ ಕಣವಿ, ಬಸೀರಸಾಬ್ ವಡ್ಡಟ್ಟಿ, ರವೀಂದ್ರ ಜವಿ, ಬಸವರಾಜ ಹಾರೋಗೇರಿ, ನಾಗನಗೌಡ ಪಾಟೀಲ, ವಾಸಪ್ಪ ಚೋಳಮ್ಮನವರ, ಅಶೋಕ ಬನ್ನಿಕೊಪ್ಪ, ಸೋಮಪ್ಪ ಬಜಮ್ಮನವರ, ಕುಬೇರ ವೀರಾಪೂರ, ಸುರೇಶ ಕವಲೂರ ಇತರರಿದ್ದರು.