ಮೈಸೂರು: ವರುಣ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ ಬೇರೆ ಕ್ಷೇತ್ರಗಳಿಂದಲೂ ಸ್ಪರ್ಧೆಗೆ ಜನ ಒತ್ತಾಯ ಮಾಡುತ್ತಿದ್ದಾರೆ. ವರುಣ ಕ್ಷೇತ್ರದಲ್ಲಿ ಹೋದಕಡೆಯಲ್ಲೆಲ್ಲ ಇಲ್ಲೆ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ನಾನು ಆ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಶುಕ್ರವಾರ ಹಾಲಿನ ನೂತನ ಶೀತಲೀಕರಣ ಘಟಕವನ್ನು ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಡಿ ಬಹಳ ವರ್ಷಗಳಾಗಿತ್ತು. ಈಗ ಸುತ್ತುವಾಗ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಎಲ್ಲ ಕಡೆ ಖುಷಿಯಿಂದ ಸ್ವಾಗತಿಸುತ್ತಿದ್ದಾರೆ. ಇದನ್ನು ಕಂಡು ಸಹಜವಾಗಿಯೆ ನನಗೂ ಖುಷಿಯಾಗುತ್ತೆ ಎಂದರು.
ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಬಹಳ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅನೇಕ ಅಭಿವೃದ್ಧಿ ಕೆಲಸ ಕೈಗೊಂಡಿದ್ದಾರೆ. ನಮ್ಮ ಸರ್ಕಾರ ಇಲ್ಲದಿದ್ದರೂ, ಸರ್ಕಾರ ಕೇಳಿದಷ್ಟು ಅನುದಾನ ಕೊಡದೆ ಇದ್ದರೂ ಇರುವ ಅನುದಾನದಲ್ಲಿ ಯತೀಂದ್ರ ಹಲವು ಕೆಲಸ ಮಾಡಿದ್ದಾರೆ ಎಂದು ತಮ್ಮ ಪುತ್ರನಿಗೆ ಶಹಬ್ಬಾಶ್ ನೀಡಿದರು.