ಜಿಲ್ಲೆ

ಬಾಂದಾರಗಳ ಗೇಟ್ ಬಂದ್ ಮಾಡಲು ಒತ್ತಾಯ

ರಟ್ಟಿಹಳ್ಳಿ: ತಾಲೂಕಿನ ಸಣ್ಣಗುಬ್ಬಿ ಮತ್ತು ಹಿರೇಮಾದಾಪುರ ಗ್ರಾಮಗಳ ನಡುವಿನ ಕುಮದ್ವತಿ ನದಿಯಲ್ಲಿರುವ ಬಾಂದಾರ್​ಗಳ ಗೇಟ್​ಗಳನ್ನು ಬಂದ್ ಮಾಡಿ ನೀರು ಸಂಗ್ರಹಿಸಬೇಕು ಎಂದು ಒತ್ತಾಯಿಸಿ ರೈತರು ಮತ್ತು ಈ ಭಾಗದ ಗ್ರಾಮಸ್ಥರು ಪಟ್ಟಣದಲ್ಲಿ ತಹಸೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಕುಮದ್ವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬಾಂದಾರಗಳನ್ನು ನಿಮಾಣ ಮಾಡಲಾಗಿದೆ. ಈ ಬಾಂದಾರ್​ಗಳಿಂದಾಗಿ ಈ ಭಾಗದ ಸಣ್ಣಗುಬ್ಬಿ, ಹಿರೇಮಾದಾಪುರ, ದೊಡ್ಡಗುಬ್ಬಿ ಮತ್ತು ಯಡಗೋಡ ಗ್ರಾಮಗಳ ರೈತರಿಗೆ ಕೃಷಿ ಚಟುವಟಿಕೆಗಾಗಿ ಮತ್ತು ಜನ ಜಾನುವಾರುಗಳಿಗೆ ಅನುಕೂಲವಾಗಿದೆ. ಬಾಂದಾರಗಳ ಗೇಟ್ ಬಂದ್ ಮಾಡುವುದರಿಂದ ನದಿಯಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಯಾಗುತ್ತದೆ. ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿಗೆ ಮತ್ತು ಹಿಂಗಾರು ಬೆಳೆಗೆ ಅನುಕೂಲವಾಗುತ್ತದೆ. ಕಳೆದ ವರ್ಷ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಗೇಟ್ ಅಳವಡಿಸುವಂತೆ ಮನವಿ ಮಾಡಿದರೂ ವಿಳಂಬ ಮಾಡಿದರು. ಇದರಿಂದ ನದಿಯ ನೀರು ಸಂಗ್ರಹವಾಗದೇ ರೈತರಿಗೆ ಅನನುಕೂಲವಾಯಿತು. ಕೂಡಲೇ ಅಧಿಕಾರಿಗಳು ಬಾಂದಾರಗಳ ಗೇಟ್ ಬಂದ್ ಮಾಡಬೇಕು. ಇಲ್ಲವಾದರೆ ಅ. 18ಕ್ಕೆ ಜಾನುವಾರುಗಳ ಸಮೇತ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.

ಶಿರಸ್ತೆದಾರ ಜಗತಾಫ್ ಎಂ.ಎಸ್. ಮನವಿ ಸ್ವೀಕರಿಸಿದರು. ಗ್ರಾಮಸ್ಥರಾದ ಶರಣಪ್ಪ ಸಿದ್ಲಿಂಗಪ್ಪನವರ, ಪ್ರಭು ಯತ್ನಳ್ಳಿ, ಮಂಜಪ್ಪ ಅಸುಂಡಿ, ಶಂಕರ ಮಾಳಗಿ, ಕರಬಸಪ್ಪ ಬಸಾಪುರ, ಬಸವರಾಜ ಏಶಪ್ಪನವರ, ರವೀಂದ್ರ ಮಸವಳ್ಳಿ, ಶಿವಾನಂದಪ್ಪ ಮಲ್ಲೇಶಪ್ಪ ಕಡೂರು, ನಾರಾಯಣ ಗೌಡರ, ಮಂಜು ಮಲ್ಲಾಡದ, ಶಿವಕುಮಾರ ಹಂಸಭಾವಿ ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು.