ವಿರಾಜಪೇಟೆ: ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಗಾಳಿ ಸಹಿತ ಮಹಾಮಳೆಗೆ ಕೊಡಗು ಜಿಲ್ಲೆ ನಲುಗಿ ಹೋಗಿದ್ದು, ಅಪಾರ ನಷ್ಟ ಅನುಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಮಳೆಹಾನಿ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಬಿಜೆಪಿ ವಿರಾಜಪೇಟೆ ಮಂಡಲ ಒತ್ತಾಯಿಸಿದೆ.
ಅಧಿಕ ಮಳೆಯಿಂದ ಬೆಳೆ ಮತ್ತು ಮನೆಗಳು ವ್ಯಾಪಕವಾಗಿ ಹಾನಿಗಿಡಾಗಿದ್ದು, ಸರ್ಕಾರ ತುರ್ತು ಪರಿಹಾರ ಘೋಷಿಸುವ ಅಗತ್ಯವಿದೆ ಎಂದು ಬಿಜೆಪಿಯ ವಿರಾಜಪೇಟೆ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ವಿವಿದೆಡೆ ನೂರಾರು ಬಡವರ ಮನೆಗಳು ನೆಲಸಮವಾಗಿವೆ. ಅನೇಕ ಮನೆಗಳು ವಾಸಕ್ಕೆ ಯೋಗ್ಯವಿಲ್ಲದಂತೆ ಹಾನಿಗಿಡಾಗಿವೆ. ಹಲವು ಕುಟುಂಬಗಳು ಆಶ್ರಯವಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿವೆ. ಆದರೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಹಾನಿಗೆ ಎಷ್ಟು ಪ್ರಮಾಣದ ಪರಿಹಾರ ಎನ್ನುವುದನ್ನು ಘೋಷಿಸಿಲ್ಲ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮನೆ ಸಂಪೂರ್ಣ ಹಾನಿಯಾದರೆ 5 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿ ಮನೆ ಹಾನಿಯ ಸಮಗ್ರ ವರದಿಯನ್ನು ತಯಾರಿಸಬೇಕು. ಮನೆ ಕಳೆದುಕೊಂಡವರಿಗೆ ತುರ್ತಾಗಿ ಮೊದಲ ಹಂತದಲ್ಲಿ 50 ಸಾವಿರ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಬೆಳೆ ನಷ್ಟ ಮತ್ತು ಜಾನುವಾರುಗಳ ಸಾವಿನ ಬಗ್ಗೆ ಅಧ್ಯಯನ ನಡೆಸಬೇಕು. ಸೂಕ್ತ ಪರಿಹಾರ ಘೋಷಿಸುವುದರೊಂದಿಗೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.