ಜಿಲ್ಲೆ

ರಾಜೀನಾಮೆಗೆ ಒತ್ತಾಯ ಸರಿಯಲ್ಲ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಡಾ ಪ್ರಕರಣ ಸಂಬಂಧಿಸಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ಮಾತ್ರಕ್ಕೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂಬ ನಿಯಮವಿಲ್ಲ. ಸದ್ಯಕ್ಕೆ ಆ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಕಾನೂನು ತಜ್ಞರೇ ಹೇಳಿದ್ದಾರೆ. ಸಿದ್ದರಾಮಯ್ಯ ಸಹ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಆದರೂ ಬಿಜೆಪಿ ವಿನಾಕಾರಣ ರಾಜೀನಾಮೆಗೆ ಒತ್ತಾಯಿಸುವುದು ಸರಿಯಲ್ಲ ಎಂದು ಕೆಪಿಸಿಸಿ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಬೇಕಾದರೆ, ಆ ಬಗ್ಗೆ ಯಾವುದಾದರೂ ಸಂಸ್ಥೆ ತನಿಖೆ ನಡೆಸಿ ಆರೋಪಿ ಪಟ್ಟಿ ಸಲ್ಲಿಸಬೇಕು. ಆದರೆ ಇಲ್ಲಿ ಅಂತಹ ಪ್ರಸಂಗ ನಡೆದಿಲ್ಲ. ರಾಜ್ಯಪಾಲರು ಅನುಮತಿ ನೀಡಿರುವುದೇ ತಪ್ಪು.
ಇಂಥ ಅನೇಕ ಪ್ರಶ್ನೆಗಳ ಮಧ್ಯೆ ರಾಜ್ಯ ಸರ್ಕಾರ ರಾಜ್ಯಪಾಲರ ನಡೆ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗುರಿಕಾರ ತಿಳಿಸಿದ್ದಾರೆ.