ಜಿಲ್ಲೆ

ಬಲವಂತದ ಮತಾಂತರಕ್ಕೆ ಒಪ್ಪದವರ ಮೇಲೆ ಮಾರಣಾಂತಿಕ ಹಲ್ಲೆ: ಒಂಬತ್ತು ಜನರ ವಿರುದ್ಧ ಎಫ್‌ಐಆರ್ ದಾಖಲು

ಕೆ.ಎನ್.ರಾಘವೇಂದ್ರ

ಶ್ರೀರಂಗಪಟ್ಟಣ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಪತ್ನಿ ಹಾಗೂ ಅತ್ತೆಯ ಮೇಲೆ ವ್ಯಕ್ತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಾಂಡವಪುರ ಪಟ್ಟಣದ ನಿವಾಸಿ ಶ್ರೀಕಾಂತ್ ಎಂಬಾತ ತನ್ನ ಕುಟುಂಬದವರೊಂದಿಗೆ ಸೇರಿದಂತೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶ್ರುತಿ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾನೆಂದು ಆರೋಪ ಕೇಳಿಬಂದಿದೆ.

ಈ ಸಂಬಂಧ ದೂರು ದಾಖಲು ಮಾಡಿರುವ ಲಕ್ಷ್ಮೀ ಸಹೋದರ ರವಿಕಿರಣ್, ತನ್ನ ಸಹೋದರಿಯನ್ನು 15 ವರ್ಷದ ಹಿಂದೆ ಪಾಲಹಳ್ಳಿಯ ಶ್ರೀಕಾಂತ್ ಎಂಬುವರೊಂದಿಗೆ ಹಿಂದು ಸಂಪ್ರದಾಯದಂತೆ ವಿವಾಹ ಮಾಡಿಕೊಡಲಾಗಿತ್ತು. ಕೆಲ ವರ್ಷದ ಬಳಿಕ ಶ್ರೀಕಾಂತ್, ತಾಯಿ ಕೃಷ್ಣವೇಣಿ ಮತ್ತು ಹಿರಿಯ ಸಹೋದರರಾದ ಹರೀಶ್, ಪ್ರಶಾಂತ್ ಅವರೊಂದಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಮಾತ್ರವಲ್ಲದೆ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ. ತಾವು ಮತಾಂತರಗೊಂಡ ಬಳಿಕ ಸಹೋದರಿ ಲಕ್ಷ್ಮೀಯನ್ನು ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಸಂಬಂಧ ಒಪ್ಪದ ಕಾರಣ ಕಿರುಕುಳ ನೀಡುತ್ತಿದ್ದಾರೆ. ಈ ಒತ್ತಡ ಸಹಿಸಲಾಗದೆ ಆತ್ಮಹತ್ಯೆಗೂ ಯತ್ನಿಸಿದ್ದಳು. ಅಂತೆಯೇ ಕೆಆರ್‌ಎಸ್ ಜಲಾಶಯದ ಬಳಿ ನಾಪತ್ತೆಯಾಗಿದ್ದಳು.ನಂತರ ಆಕೆಯನ್ನು ಹುಡುಕಿ ಮನೆಗೆ ಕರೆದುಕೊಂಡು ಬರಲಾಗಿತ್ತು.

ಬಳಿಕ ರಾಜಿ ಪಂಚಾಯಿತಿ ಮಾಡಲೆಂದು ಏ.12ರಂದು ಶ್ರೀರಂಗಪಟ್ಟಣದ ರವಿಕುಮಾರ್ ಎಂಬುವರ ಮನೆಗೆ ಲಕ್ಷ್ಮೀ ಹಾಗೂ ತಾಯಿ ಶ್ರುತಿ ಅವರನ್ನು ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಕಾಂತ್, ಹರೀಶ್, ರವಿಕುಮಾರ್, ಸುಬ್ರಮಣ್ಯ, ಪ್ರಭಾ, ಪ್ರಶಾಂತ್, ನಾಗಿಣಿ, ಕೃಷ್ಣವೇಣಿ, ಸಾಗರ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.