ಅಲೆಮಾರಿ ಹಿಂದುಳಿದ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಕ್ಕೆ ಸೇರಿಸುವಂತೆ ಆಗ್ರಹಿಸಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಬಾಬು ಹೆಳವರ, ಎಚ್.ಎನ್.ಗೋಗಿ, ಸುನೀಲ ಹೆಳವರ (ಕಡೂರ), ಶಿವಶರಣ ಹೆಳವರ, ದೇವೇಂದ್ರ ಹೆಳವರ ಇತರರಿದ್ದರು.  
ಜಿಲ್ಲೆ

ವಿಜಯಪುರ : ಎಸ್‌ಟಿಗೆ ಸೇರ್ಪಡೆಗೊಳಿಸಲು ಹೆಳವ ಸಮಾಜದಿಂದ ಒತ್ತಾಯ

ವಿಜಯಪುರ : ಅಲೆಮಾರಿ ಹಿಂದುಳಿದ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಕ್ಕೆ ಸೇರಿಸುವಂತೆ ಜಿಲ್ಲೆಯ ಹೆಳವ ಸಮಾಜದವರು ಬುಧವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಜಿಲ್ಲಾ ಹೆಳವ ಸಮಾಜದ ಅಧ್ಯಕ್ಷ ಬಾಬು ಹೆಳವರ ಮಾತನಾಡಿ, ಹಿಂದುಳಿದ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬುದು ನಮ್ಮ ಬಹುದಿನಗಳ ಬೇಡಿಕೆಯಾಗಿದೆ. ಇದುವರೆಗೂ ಯಾವ ಸರ್ಕಾರವೂ ನಮ್ಮ ಬೇಡಿಕೆ ಈಡೇರಿಸುವ ಇಚ್ಛಾಶಕ್ತಿ ತೋರಿಲ್ಲ. ಸಮಾಜಬಾಂಧವರು ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿ ಬಂದಿದೆ. ಈಗಲಾದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಮೂಲಕ ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ಹೆಳವ ಸಮಾಜದವರು ಈಗ ಜಾಗೃತರಾಗಿ ಸ್ವಯಂಪ್ರೇರಣೆಯಿಂದ ರಾಜ್ಯಾದ್ಯಂತ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಎಸ್‌ಟಿ ಸೇರ್ಪಡೆಯಾಗುವವರೆಗೆ ನಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಗುಡುಗಿದರು.

ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ತೀರಾ ಹಿಂದುಳಿದ ಹೆಳವ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲ ಅರ್ಹತೆ ಹೊಂದಿದೆ. 1975ರಲ್ಲಿ ಎಲ್.ಜಿ.ಹಾವನೂರ ವರದಿ, 1992ರಲ್ಲಿ ಡಿ.ಕೆ.ನಾಯ್ಕರ ವರದಿಯಲ್ಲಿ ಹೆಳವ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಲಾಗಿದೆ. ಅಲ್ಲದೆ 2018 ರಲ್ಲಿ ಹಂಪಿ ಕನ್ನಡ ವಿ.ವಿ.ಯ ಡಾ.ಎಲ್.ಶ್ರೀನಿವಾಸ ಅವರು ಹೆಳವ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದರೂ, ಇದುವರೆಗೆ ಈ ಕಡತ ಸಮಾಜ ಕಲ್ಯಾಣ ಇಲಾಖೆಯಲ್ಲಿ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೆ ಸಣ್ಣ ಸಮುದಾಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್.ಎನ್.ಗೋಗಿ, ಸುನೀಲ ಹೆಳವರ (ಕಡೂರ), ಶಿವಶರಣ ಹೆಳವರ, ದೇವೇಂದ್ರ ಹೆಳವರ, ಶಂಕರಲಿಂಗ ಸ್ವಾಮಿಗಳು, ಬಸವರಾಜ ಗುರೂಜಿ, ಮಲ್ಲಿಕಾರ್ಜುನ ಹೆಳವರ, ಅಮೃತ ದಪ್ಪಿನ, ಸಂತೋಷ ಹೆಳವರ, ಭೀಮಣ್ಣ ಭೈರಾಮಡಗಿ, ಸಿದ್ದಣ್ಣ ಹೆಳವರ, ಸಾಬು ಹೆಳವರ, ದತ್ತು ಹೆಳವರ, ಶರಣಪ್ಪ ಹೆಳವರ, ಸಂಗಮೇಶ ಹೆಳವರ, ವಿಜಯ ಹೆಳವರ, ಸಾಯಬಣ್ಣ ಹೆಳವರ, ಹಣಮಂತ್ರಾಯ ಹಳಿಸಗರ, ರಾಘವೇಂದ್ರ ಮಾಸ್ತರ, ಶಿವಶರಣಪ್ಪ ಕನ್ನೊಳ್ಳಿ, ಹಣಮಂತ್ರಾಯ ಖಾನಾಪೂರ, ಅಶೋಕ ಹೆಳವರ, ಕೆಂಚಪ್ಪ ಹೆಳವರ ಮತ್ತಿತರರಿದ್ದರು.