ಕಳಸ: ಆಟಿಡೊಂಜಿ ಕೂಟ ಕಾರ್ಯಕ್ರಮ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಈ ಮೂಲಕ ಸಂಘಟನೆ ಬಲಗೊಳಿಸಬೇಕು ಎಂದು ಕಳಸ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಕಿರಣ್ ಶೆಟ್ಟಿ ಹೇಳಿದರು.
ಕಳಸ ಬಂಟರ ಯಾನೆ ನಾಡವರ ಸಂಘದಿಂದ ಬುಧವಾರ ಆಯೋಜಿಸಿದ್ದ ಆಟಿಡೊಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಯಕ್ರಮ ಕೇವಲ ಆಟಿಯ ಸ್ವಾದಿಷ್ಟ ತಿಂಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರದೆ ನಮ್ಮ ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಬ್ಯಾಗ್ ವಿತರಣೆ ಮಾಡುತ್ತಿದ್ದೇವೆ. ಇಂಥ ಕಾರ್ಯಕ್ರಮಗಳಿಂದ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ತುಳುವರ ಸಂಸ್ಕೃತಿ, ಭಾಷೆ, ಆಹಾರ, ಆಚಾರ-ವಿಚಾರ ಬಹಳ ವಿಶೇಷವಾದುದು. ಈ ವೈವಿಧ್ಯವನ್ನು ಆಟಿಡೊಂಜಿ ಕೂಟದ ಮುಖಾಂತರ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ವಿನಯಕುಮಾರ್ ಶೆಟ್ಟಿ ಮಾತನಾಡಿ, ಸಂಘದಿಂದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದರು.
ಆಟಿಡೊಂಜಿ ಕೂಟಕ್ಕೆ ಮಹಿಳೆಯರು 40ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ತಯಾರಿಸಿ ತಂದಿದ್ದರು. ಆಟಿ ಮಾಸದ ಖಾದ್ಯಗಳಾದ ಅರಿಶಿಣ ಕಡುಬು, ಹಲಸಿನ ಹಣ್ಣಿನ ಕಡುಬು, ಪತ್ರೊಡೆ, ಕೋರಿ ರೊಟ್ಟಿ, ಒಂದೆಲಗ ಚಟ್ನಿ, ಸೀಗಡಿ ಚಟ್ನಿ, ಎಟ್ಟಿ ಚಟ್ನಿ, ಮೊಟ್ಟೆ ಗಸಿ, ಕೆಸುವಿನ ಪಲ್ಯ, ಚಟ್ನಿ, ಕಳಲೆ ಪಲ್ಯ, ಶ್ಯಾವಿಗೆ ಕಡುಬು, ಹುರುಳಿ ಚಟ್ನಿ, ಹುರುಳಿ ಸಾರು, ಚಿಕನ್ ಪುಳಿ ಮುಂಚಿ, ಶ್ಯಾವಿಗೆ, ಇಡ್ಲಿ ಗಮನ ಸೆಳೆದವು. ಬಂಟರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹಿಳೆಯರು ನಡೆಸಿಕೊಟ್ಟ ‘ಸುಂದರನ ಮದಿಮೆ’ ನಾಟಕ ಎಲ್ಲರ ಗಮನ ಸೆಳೆಯಿತು.
ಸಮುದಾಯದ 55 ವಿದ್ಯಾರ್ಥಿಗಳಿಗೆ ಬ್ಯಾಗ್, 11 ಮಂದಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಂಟರ ಸಂಘದ ಮುಖಂಡರಾದ ಶೇಖರ ಶೆಟ್ಟಿ, ಗೋಪಾಲ ಶೆಟ್ಟಿ, ಶ್ಯಾಮ್ ಶೆಟ್ಟಿ, ಅರುಣ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಕುಸುಮಾವತಿ ಶೆಟ್ಟಿ, ಸುಪರ್ಣ ಪ್ರಕಾಶ್, ಉದಯ್ ಶೆಟ್ಟಿ ಇತರರಿದ್ದರು.