ದೆಹಲಿಯ ಪಾರ್ಲಿಮೆಂಟ್ ಹೌಸ್‌ನ ಪ್ರಧಾನಿ ಕಚೇರಿಯಲ್ಲಿ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಸಭೆ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಅರುಣ ಸಿಂಗ್, ಈರಣ್ಣ ಕಡಾಡಿ, ಸುಶೀಲ ಮೋದಿ ಇತರರಿದ್ದರು. 
ಜಿಲ್ಲೆ

ಯುವ ರಾಜಕಾರಣಿಗಳಿಗೆ ಪ್ರಧಾನಿ ಮೋದಿ ಮಾದರಿ

ಮೂಡಲಗಿ: ರಾಜ್ಯಸಭೆಯಲ್ಲಿ ಜರುಗಿದ ಸಂಸದೀಯ ಅನುಭವಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿ ಕೊಂಡಿದ್ದು, ನೂತನ ರಾಜ್ಯಸಭಾ ಸದಸ್ಯರಾದ ನಮ್ಮೆಲ್ಲರಿಗೂ ಅವಿಸ್ಮರಣೀಯ ಗಳಿಗೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ದೆಹಲಿಯ ಪಾರ್ಲಿಮೆಂಟ್ ಹೌಸ್‌ನ ಪ್ರಧಾನಿ ಕಚೇರಿಯಲ್ಲಿ ಶುಕ್ರವಾರ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಸಂಸದರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯದ 25 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕೇಂದ್ರ ಸರ್ಕಾರದ ಜನಪರ, ರೈತಪರ, ನೂತನ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಲಾಗಿದ್ದನ್ನು ತಿಳಿಸದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು. ಬೇರೆ ಬೇರೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬಿಜೆಪಿ ನಿಮಗೆ ಈ ಅವಕಾಶ ನೀಡಿದೆ. ರಾಜ್ಯಸಭೆ ಅಧಿವೇಶನದ ಕಲಾಪಗಳಲ್ಲಿ ಪ್ರತಿದಿನ ಸರಿಯಾದ ಸಮಯಕ್ಕೆ ಹಾಜರಾಗಿ, ತಮ್ಮ ಪೂರ್ಣ ಸಮಯವನ್ನು ಅಧಿವೇಶನದಲ್ಲಿ ಕಳೆಯುವ ಮೂಲಕ ನಿಮಗೆ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ಮೋದಿ ಮಾರ್ಗದರ್ಶನ ಮಾಡಿದರು ಎಂದು ಕಡಾಡಿ ತಿಳಿಸಿದ್ದಾರೆ.

ಕಲಾಪದ ಹಲವಾರು ಅನುಭವಗಳನ್ನು ಮೋದಿ ಅವರಿಂದ ಕೇಳಿ ಮನವರಿಕೆ ಮಾಡಿಕೊಂಡೆವು. ದೇಶದ ಪ್ರಧಾನಿಯಾದರು ಕೂಡ ಮೋದಿ ಅವರು ನಮ್ಮಂತಹ ಸಾಮಾನ್ಯ ಕಾರ್ಯಕರ್ತರ ಬೆಳವಣಿಗೆಗೆ ಅವಶ್ಯಕವಾದ ಸಣ್ಣ ಸಂಗತಿಗಳನ್ನು ಗಮನಕ್ಕೆ ತರುವ ಮೂಲಕ ಅವರ ಮೇರು ವ್ಯಕ್ತಿತ್ವವನ್ನು ಹತ್ತಿರದಿಂದ ಗಮನಿಸಿದ ಅವಕಾಶ ನಮಗೆಲ್ಲ ಸಿಕ್ಕಿದ್ದು ಸುದೈವ ಎಂದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್, ಬಿಹಾರದ ಸುಶೀಲ ಮೋದಿ ಸೇರಿ ಉತ್ತರಪ್ರದೇಶ, ಉತ್ತರಾಖಂಡ, ಕರ್ನಾಟಕದ ರಾಜ್ಯಸಭಾ ಸದಸ್ಯರು ಉಪಸ್ಥಿತರಿದ್ದರು.