ಜಿಲ್ಲೆ

ಕಾರ್ಮಿಕರಿಗೆ ಕೆವೈಸಿ ಕಂಟಕ!

| ರವಿ ಗೋಸಾವಿ ಬೆಳಗಾವಿ

ನೆರೆ ಸಂತ್ರಸ್ತರಿಗೆ ಸೂರು ನಿರ್ಮಿಸುತ್ತಿರುವ ಕಟ್ಟಡ ಕಾರ್ಮಿಕರು ಹಾಗೂ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ದಿನವಿಡೀ ದುಡಿಯುತ್ತಿರುವ ಇನ್ನಿತರ ಗುತ್ತಿಗೆ ಕಾರ್ಮಿಕರು ಇದೀಗ ಅನ್ನಭಾಗ್ಯ ಅಕ್ಕಿ ಪಡೆಯಲು ಪರದಾಡುವಂತಾಗಿದೆ.
ಬೃಹತ್ ನಗರಗಳಲ್ಲಿನ ಕಾಮಗಾರಿಗಳಿಗೂ ಸೇರಿ ನೆರೆ ಹಾಗೂ ಪ್ರವಾಹದಿಂದ ನಲುಗಿದ ಜಿಲ್ಲೆಗಳಲ್ಲಿ ಗುಣಮಟ್ಟದ ಮನೆ ನಿರ್ಮಾಣಕ್ಕೆ ಬಹುತೇಕ ಎಲ್ಲರೂ ಸಿಮೆಂಟ್‌ನ್ನೇ ಬಳಸುತ್ತಿದ್ದಾರೆ. ಬರಿಗೈಯಿಂದ ಸಿಮೆಂಟ್ ಕೆಲಸ ಮಾಡುತ್ತಿರುವುದರಿಂದ ಬೆರಳುಗಳಲ್ಲಿ ಚಿಲ್ಲಿ(ತೂತು) ಬಿದ್ದು, ಚರ್ಮ ಉಬ್ಬಿಕೊಂಡು ಬೆರಳಚ್ಚು ಅಳಿಸಿದಂತಾಗಿವೆ. ಪಡಿತರ ವಿತರಣೆಯಲ್ಲಿನ ಅಕ್ರಮ ತಡೆಗಟ್ಟಲು ಸರ್ಕಾರ ಕಡ್ಡಾಯಗೊಳಿಸಿರುವ ಬಯೋಮೆಟ್ರಿಕ್‌ನಲ್ಲಿ (ಕೆವೈಸಿ ಮಾಡಲು) ಕಟ್ಟಡ ಕಾರ್ಮಿಕರ ಬೆರಳಚ್ಚು ಸರಿಯಾಗಿ ಮೂಡದೇ ಗುರುತು ತಪ್ಪುತ್ತಿರುವುದರಿಂದ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಪ್ಪದ ಸರ್ವರ್ ಸಮಸ್ಯೆ: ಬಯೋಮೆಟ್ರಿಕ್‌ಗಾಗಿ ಎರಡು-ಮೂರು ದಿನದ ಕೂಲಿ ಬಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂದೆ ದಿನವಿಡೀ ನಿಂತು ಹತ್ತೂ ಬೆರಳುಗಳಲ್ಲಿ ಯಾವುದಾದರೂ ಒಂದು ಮೂಡಬಹುದೆಂದು ಪ್ರಯತ್ನಿಸಿದರೆ ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿದೆ. ಹೀಗೆ ದಿನವಿಡೀ ಕಳೆಯುವ ಬದಲು ಕೆಲಸ ಮಾಡಿ, ಬಂದ ಸಂಬಳದಲ್ಲಿ ಅಕ್ಕಿ ಕೊಂಡುಕೊಳ್ಳುತ್ತಿದ್ದೇವೆ ಎನ್ನುತ್ತಾರೆ
ರಾಮದುರ್ಗ ತಾಲೂಕಿನ ಮಹ್ಮದಅಲಿ ನದಾಫ್.

ಬಿಡುವಿಲ್ಲದಕ್ಕೆ ಬಿಗಡಾಯಿಸಿದ ಸಮಸ್ಯೆ: ನೆರೆಹಾನಿಗೆ ತುತ್ತಾಗಿರುವ ಜಿಲ್ಲೆಗಳಲ್ಲಿ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಮೂರು ತಿಂಗಳ ಗಡುವು ನೀಡಿರುವ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಕಾಮಗಾರಿ ಬರದಿಂದ ಸಾಗಿದ್ದು, ಸಹಜವಾಗಿಯೇ ಕಳೆದ ಒಂದು ತಿಂಗಳಿಂದ ಕಟ್ಟಡ ಕಾರ್ಮಿಕರಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ. ಪ್ರತಿಯೊಬ್ಬರೂ ತಮ್ಮ ಮನೆ ಪೂರ್ಣಗೊಳಿಸಲೆಂದು ಸಂಬಳ ಹೆಚ್ಚಿಗೆ ನೀಡುತ್ತೇವೆ ಬನ್ನಿ, ರಾತ್ರಿಯಾದರೂ ಪರವಾಗಿಲ್ಲ ಪೋಕಸ್ ಲೈಟ್ ಹಾಕಿಕೊಡುತ್ತೇವೆ ಕೆಲಸ ಮಾಡಿ ಎಂದು ಕರೆಯುತ್ತಿದ್ದಾರೆ. ಒಂದೇ ದಿನ ಎರಡೆರಡು ಸಂಬಳ ಪಡೆಯಬಹುದೆಂದು ಕೆಲಸ ಮಾಡಿಕೊಡುತ್ತಿದ್ದೇವೆ. ಇದರಿಂದಾಗಿ ಕೈ ಬೆರಳುಗಳಲ್ಲಿ ಚಿಲ್ಲಿ ಬಿದ್ದು,
ಬಯೋಮೆಟ್ರಿಕ್‌ಗೆ ಬೆರಳಚ್ಚು ಮೂಡುತ್ತಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದಾರೆ.

ನಗರಗಳಲ್ಲೂ ತೊಂದರೆ

ಹಲವು ಬಾರಿ ಹೇಳಿದರೂ ಕಾರ್ಮಿಕರು ಕೈಗಳಿಗೆ ಗ್ಲೌಸ್ ಧರಿಸುವುದಿಲ್ಲ. ಗ್ಲೌಸ್ ಧರಿಸುವುದರಿಂದ ಕೆಲಸಕ್ಕೆ ಅನುಕೂಲಕ್ಕಿಂತ ಅಡ್ಡಿಯೇ ಹೆಚ್ಚು ಎಂಬಂತೆ ವರ್ತಿಸುತ್ತಾರೆ. ನಾವು ಕಾಮಗಾರಿ ಬೇಗನೇ ಮುಕ್ತಾಯ ಮಾಡಬೇಕೆಂಬ ಒತ್ತಡದಲ್ಲಿ ಅದೆಲ್ಲವನ್ನೂ ಗಮನಿಸುವುದೇ ಇಲ್ಲ. ಹೀಗಾಗಿ ಗುತ್ತಿಗೆ ಪಡೆದಿರುವ ರಸ್ತೆ, ಗಟಾರ, ಚರಂಡಿ ಹಾಗೂ ಇನ್ನಿತರ ಕಾಮಗಾರಿಗಳಲ್ಲಿನ ಕಾರ್ಮಿಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಕಟ್ಟಡ ನಿರ್ಮಾಣ ಗುತ್ತಿಗೆದಾರರೊಬ್ಬರು.

ಕಾರ್ಮಿಕರ, ವೃದ್ಧರ ಬೆರಳುಗಳು ಬಯೋಮೆಟ್ರಿಕ್‌ನಲ್ಲಿ ಮೂಡದ ಕಾರಣ ಸರ್ಕಾರದ ಮಟ್ಟದಲ್ಲಿ ಪರ್ಯಾಯ ಕ್ರಮ ಕೈಗೊಳ್ಳಬೇಕು. ಸದ್ಯಕ್ಕೆ ಸರ್ವರ್ ಹಾಗೂ ತಾಂತ್ರಿಕ ತೊಂದರೆಯಿಂದ ಕೆವೈಸಿ ಮಾಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. | ಚನ್ನಬಸಪ್ಪ ಕೊಡ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ