ಗುಡೇಕೋಟೆ ಕರಡಿಧಾಮದಲ್ಲಿರುವ ಸಿಮೆಂಟ್ ತೊಟ್ಟಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು. 
ಜಿಲ್ಲೆ

ವನ್ಯಜೀವಿಗಳಿಗೆ ಟ್ಯಾಂಕರ್ ನೀರೇ ಗತಿ !

ರುದ್ರಪ್ಪ ವಾಲಿ

ಕಾನಹೊಸಹಳ್ಳಿ: ಮಳೆಯ ಅಭಾವದಿಂದ ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಜನ, ಜಾನುವಾರು ಪರಿತಪಿಸುವಂಥ ವಾತಾವರಣ ಸೃಷ್ಟಿಯಾಗಿದೆ.
ಏಷ್ಯಾದ 2ನೇ ಅತಿದೊಡ್ಡ ಕರಡಿಧಾಮವೆಂಬ ಹೆಗ್ಗಳಿಕೆ ಹೊಂದಿರುವ ಗುಡೇಕೋಟೆ ಕರಡಿಧಾಮದಲ್ಲಿ ವನ್ಯಜೀವಿಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ಸಂಗ್ರಹಿಸುವ ಅನಿವಾರ್ಯತೆ ಎದುರಾಗಿದೆ. ಕಾಡು ಪ್ರಾಣಿ, ಪಕ್ಷಿಗಳಿಗೆ ಕುಡಿವ ನೀರಿನ ಬವಣೆ ಜತೆಗೆ ಆಹಾರದ ಕೊರತೆಯಿಂದ ಜೀವ ಸಂಕುಲ ಉಳಿಸುವುದು ಸವಾಲಾಗಿ ಪರಿಣಮಿಸಿದೆ.

ಕರಡಿಧಾಮದಲ್ಲಿರುವ ವನ್ಯ ಜೀವಿಗಳಿಗೆ ಟ್ಯಾಂಕರ್ ನೀರೇ ಗತಿಯಾಗಿದೆ. ಸದ್ಯ ಬೇಸಿಗೆ ಆರಂಭವಾಗಿದ್ದು, ಜತೆಗೆ ಹಲವು ದಶಕಗಳಿಂದ ಕಾಣದಂತಹ ಬಿರು ಬಿಸಿಲಿನ ತಾಪದಿಂದ ಕೆರೆ, ಗೋಕಟ್ಟೆಗಳಲ್ಲಿದ್ದ ಅಲ್ಪ ಸ್ವಲ್ಪ ನೀರು ಬತ್ತಿ ಹೋಗಿ ವನ್ಯಜೀವಿಗಳಿಗೆ ಜೀವಜಲದ ಸಂಕಷ್ಟ ತಲೆದೋರಿ ಜಲಕ್ಷಾಮ ಉಂಟಾಗಿದೆ. ಬಿಸಿಲಿನಿಂದ ಕರಡಿಧಾಮದ ವನ್ಯಜೀವಿಗಳಿಗೆ ಕುಡಿವ ನೀರಿನ ತೊಂದರೆಯಾಗದಂತೆ ಅರಣ್ಯ ಇಲಾಖೆ ವನ್ಯಜೀವಿಗಳ ರಕ್ಷಣೆಗಾಗಿ ಕುಡಿವನೀರು ಒದಗಿಸಲು ಶ್ರಮಿಸುತ್ತಿದೆ.

ಗೋಕಟ್ಟೆಗಳು ಖಾಲಿ: ಗುಡೇಕೋಟೆ ಕರಡಿಧಾಮ ಅರಣ್ಯ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಗೋಕಟ್ಟೆಗಳು, 13 ಚೆಕ್‌ಡ್ಯಾಂಗಳಿದ್ದು ಅವೆಲ್ಲವೂ ಖಾಲಿಯಾಗಿವೆ. ಹೀಗಾಗಿ, ಕಳೆದ ನವೆಂಬರ್‌ನಿಂದಲೂ ಕರಡಿಧಾಮದ 8 ಬೋರ್‌ವೆಲ್‌ಗಳಲ್ಲಿ ಸಿಗುವ ಅಲ್ಪ ಸ್ವಲ್ಪ ನೀರನ್ನೇ ಟ್ಯಾಂಕರ್‌ನಲ್ಲಿ ತುಂಬಿಸಿಕೊಂಡು ಅರಣ್ಯ ಪ್ರದೇಶದಲ್ಲಿರುವ 23 ಸಿಮೆಂಟ್ ತೊಟ್ಟಿಗಳಿಗೆ ಬಿಡಲಾಗುತ್ತಿದೆ. ಒಂದೊಂದು ತೊಟ್ಟಿಗೆ 15 ದಿನಗಳಿಗೊಮ್ಮೆ 3 ಸಾವಿರ ಲೀಟರ್‌ನಷ್ಟು ಜಲವನ್ನು ಸಂಗ್ರಹಿಸಲಾಗುತ್ತಿದೆ. ಈವರೆಗೆ 80 ಟ್ಯಾಂಕರ್ ನೀರು ಪೂರೈಸಲಾಗಿದೆ.

ಕರಡಿ ಧಾಮದ ವ್ಯಾಪ್ತಿ:

ವಿಶ್ವದಲ್ಲಿ ವಿಶಿಷ್ಟ ಪ್ರಭೇದದ ಸಂತತಿ ಅಪರೂಪದ ಕಪ್ಪು ಕರಡಿಗಳು ಗುಡೇಕೋಟೆ ಕರಡಿ ಧಾಮದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿವೆ. 16.647 ಹೆಕ್ಟೇರ್ ಅರಣ್ಯ ಪ್ರದೇಶ ಕರಡಿಧಾಮ ವಿಸ್ತೀರ್ಣ ಹೊಂದಿದ್ದು. ಹುಲಿಕುಂಟೆ ಅರಣ್ಯದ ಭೀಮಸಮುದ್ರ ಕರಡಿಹಳ್ಳಿ ಭಾಗದ ಅರಣ್ಯ ಸೇರಿದೆ. ವನ್ಯಜೀವಿಗಳಿಗೆ ಆಹಾರ ಒದಗಿಸಲು ನೇರಳೆ, ಸೀತಾಫಲ, ಹಲಸು, ಬಸರಿ, ಆಲ, ಅರಳಿ ಸೇರಿ ನಾನಾ ಪ್ರಭೇದದ ಗಿಡಗಳನ್ನು ಬೆಳೆಸಲಾಗಿದೆ. ಆದರೆ, ಈ ಬಾರಿ ಮಳೆ ಇಲ್ಲದೆ ಅಂತರ್ಜಲ ಕೊರತೆಯಿಂದ ಗಿಡ, ಮರಗಳೆಲ್ಲ ಒಣಗಿ ಕಾಯಿ, ಹಣ್ಣು ಬಿಟ್ಟಿಲ್ಲ. ಗೆಡ್ಡೆ-ಗೆಣಸು ಸಹ ಸಿಗುತ್ತಿಲ್ಲ. ಇನ್ನು, ಕರಡಿಗಳಿಗೆ ಪ್ರಮುಖ ಆಹಾರವಾದ ಗೆದ್ದಲು ಹುಳು, ಇರುವೆ, ಗೊದ್ದಗಳು ಕಡಿಮೆಯಾಗಿವೆ ಎನ್ನಲಾಗಿದೆ.

ಅಧಿಕಾರಿಗಳಿಗೆ ತಲೆ ಬಿಸಿಯಾಗಿಸಿ

ಕರಡಿಧಾಮದಲ್ಲಿ ಅಂದಾಜು 40-50 ಕರಡಿಗಳು, 8-10 ಚಿರತೆ, ಕಾಡುಬೆಕ್ಕು, ತೋಳ, ನರಿ, ಮುಳ್ಳುಹಂದಿ, ಚಿಪ್ಪುಹಂದಿ, ಕಾಡುಹಂದಿ, ಪುನುಗುಬೆಕ್ಕು, ತಾಳೆ ಪುನುಗು ಸೇರಿ 150 ಜಾತಿ ಪಕ್ಷಿಗಳು, 12ಜಾತಿ ಹಾವುಗಳು, ನಕ್ಷತ್ರ ಅಮೆಗಳಂಥ ಜೀವಸಂಕುಲ ಆಶ್ರಯ ಪಡೆದಿವೆ. ಇಂಥಹ ಜೀವ ವೈವಿಧ್ಯದ ತಾಣದಲ್ಲಿ ಕುಡಿವನೀರಿನ ಅಭಾವ ನೀಗಿಸುವುದೇ ಅರಣ್ಯ ಅಧಿಕಾರಿಗಳಿಗೆ ತಲೆ ಬಿಸಿಯಾಗಿಸಿದೆ.

ಗುಡೇಕೋಟೆ ಕರಡಿಧಾಮದಲ್ಲಿರುವ ವನ್ಯಜೀವಿಗಳಿಗೆ 2 ತಿಂಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ. ರಾಮದುರ್ಗ, ಗಂಡಬೊಮ್ಮನಹಳ್ಳಿ, ಅಪ್ಪೇನಹಳ್ಳಿ ಕೆರೆಗಳಲ್ಲಿ ಸ್ವಲ್ಪ ನೀರಿರುವುದು ಅನುಕೂಲವಾಗಿದೆ. ಇನ್ನು ಹುಲಿಕುಂಟೆ ಪ್ರದೇಶದಲ್ಲಿನ ಕರಡಿಧಾಮದಲ್ಲಿರುವ ಜೀವ ಸಂಕುಲಕ್ಕೆ ಟ್ಯಾಂಕರ್ ನೀರಿನ ಅಗತ್ಯವಿದೆ.ಬಿ.ಎಸ್.ಮಂಜುನಾಥಆರ್‌ಎಫ್‌ಒ ಕರಡಿಧಾಮ ಅರಣ್ಯ ವಲಯ ಗುಡೇಕೋಟೆ