ತೆಲಸಂಗ: 3 ವರ್ಷಗಳಿಂದ ನೀರಿಗಾಗಿ ಗ್ರಾಮಸ್ಥರು ಹಾಗೂ ಕೆಲ ರೈತರ ಮಧ್ಯೆ ತಿಕ್ಕಾಟ ತಾರಕಕ್ಕೇರಿದ್ದು, ಶನಿವಾರ ಕೆರೆ ನೀರು ಹರಿ ಬಿಟ್ಟಿದ್ದಕ್ಕೆ ರೊಚ್ಚಿಗೆದ್ದ ಜನರು ಸ್ಥಳೀಯ ಗ್ರಾಪಂನಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಕೆರೆಗೆ ತೆರಳಿ ಕರೆ ನೀರು ಹರಿಯುವ ಗೇಟ್ ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 3-4 ವರ್ಷಗಳಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಅನುಭವಿಸಿ ಜನರು ಮತ್ತು ಜಾನುವಾರುಗಳೊಂದಿಗೆ ಗುಳೆ ಹೋಗುತ್ತಿದ್ದಾರೆ. ಇದೆಲ್ಲ ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಕೆರೆಯ ನೀರನ್ನು ಯಾರೋ 4 ಜನರ ಹಿತಕ್ಕಾಗಿ ಹರಿಬಿಟ್ಟಿರುವ ಕ್ರಮ ಸರಿಯಲ್ಲ. ಕಾನೂನಿಗಿಂತ ಇಲ್ಲಿ ಮಾನವೀಯತೆ ಮುಖ್ಯ.
ಕೆರೆಯ ಕೆಳ ಪ್ರದೇಶದಲ್ಲಿ ಇರುವ ಗದ್ದೆಗಳ ಕೆಲ ರೈತರು ಬೆಳೆಗೆ ನೀರು ಕೇಳುತ್ತಿರುವುದು ನಿಜ. ಆದರೆ, ಆ 4 ರೈತರ ಹಿತಕಾಯಲು ಸುಮಾರು 20 ಸಾವಿರ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಂದೊಡ್ಡುವುದು ಯಾವ ನ್ಯಾಯ? ಸದ್ಯಕ್ಕೆ ಎಲ್ಲ ಗ್ರಾಮಗಳಿಗೆ ಜಾಕ್‌ವೆಲ್ ನೀರು ಸರಬರಾಜು ಮಾಡುತ್ತಿದ್ದಾರೆ. ಪ್ರಸಕ್ತ ವರ್ಷ ಮಳೆಯೂ ಚೆನ್ನಾಗಿ ಆಗಿದೆ. ಜಾಕ್‌ವೆಲ್ ನೀರು ನದಿಯಲ್ಲಿ ನೀರು ಇರುವವರಿಗೆ ಮಾತ್ರ. ನದಿ ಬತ್ತಿದ ಬಳಿಕ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇದ್ದು, ಕೆರೆ ನೀರನ್ನು ಕಾಯ್ದುಕೊಳ್ಳಲು ಪತ್ರದ ಮೂಲಕ ವಿನಂತಿಸಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ತಕ್ಷಣ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಕೆರೆಗೆ ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಿರುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಟ್ಯಾಂಕರ್‌ಗೆ ತುಂಬಿಕೊಳ್ಳಲು ಜಲ ಮೂಲವೇ ಇಲ್ಲ. ಹಾಗಾಗಿ ಕೆರೆಯ ನೀರು ಉಳಿಸಿಕೊಂಡು ಹತ್ತಾರು ಹಳ್ಳಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಥಣಿ ಇಒ ರವಿ ಬಂಗಾರೆಪ್ಪನವರ, ನದಿ ಬತ್ತಿದಾಗ ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗುತ್ತದೆ. ಟ್ಯಾಂಕರ್ ಮೂಲಕ ನೀರಿಗೆ ಇದೇ ಕೆರೆ ನೀರು ಮೂಲವಾಗಿದೆ.
ಹತ್ತಿರದಲ್ಲಿ ಎಲ್ಲಿಯೂ ನೀರಿಲ್ಲ. ರೈತರು ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಬಾರದು. ಕೆರೆಯಲ್ಲಿದ್ದ ಹೆಚ್ಚುವರಿ ನೀರು ಬಿಡಬೇಕು, ಕಡಿಮೆ ಇದ್ದರೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಗುರಪ್ಪ ದಾಶ್ಯಾಳ, ತಾಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಈರಣ್ಣ ಕುಮಠಳ್ಳಿ, ಡಾ.ಬಸವರಾಜ ರೋಡಗಿ, ಡಾ.ಎಸ್.ಐ.ಇಂಚಗೇರಿ, ವಿವೇಕಾನಂದ ಹಳಿಂಗಳಿ, ರಾಜು ಕಾರಂಡೆ, ಅಪ್ಪು ಹೆಗಡ್ಯಾಳ ಇತರರು ಇದ್ದರು.
ಕೆರೆ ನೀರಿನ ಸಮಸ್ಯೆ ಕೋರ್ಟ್‌ನಲ್ಲಿದೆ. ಕುಡಿಯುವ ನೀರಿನ ಹೆಸರಲ್ಲಿ ರೈತರು ಪಂಪ್‌ಸೆಟ್ ಅಳವಡಿಸುತ್ತಿದ್ದಾರೆ. ಬರುವ ಸೋಮವಾರ ಸಭೆ ಕರೆದಿದ್ದೇವೆ. ಸಮಸ್ಯೆಯನ್ನು ಸ್ಪಷ್ಟವಾಗಿ ತಿಳಿದುಕೊಂಡು ಪರಿಹಾರ ಕಂಡುಕೊಳ್ಳಲಾಗುವುದು. | ದುಂಡಪ್ಪ ಕೋಮಾರ ಅಥಣಿ ತಹಸೀಲ್ದಾರ್