ಜಿಲ್ಲೆ

ಕರೊನಾ ಸೋಂಕಿತರಿಗೆ ಜೊಲ್ಲೆ ದಂಪತಿ ನೆರವು

ಚಿಕ್ಕೋಡಿ: ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ, ಆಯುಷ್ಮಾನ್ ಭಾರತ್, ಸುವರ್ಣ ಕರ್ನಾಟಕ ಸಹಯೋಗದಡಿ ಖಾಸಗಿ ವೈದ್ಯರು, ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿಪ್ಪಾಣಿಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್, ಜಿಲ್ಲೆಗೆ ಮಾದರಿಯಾಗಿದೆ.

ಜಿಲ್ಲೆಯಲ್ಲಿ ನಿತ್ಯ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡರೂ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಹೀಗಾಗಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಸಚಿವೆ ಶಶಿಕಲಾ, ಸಂಸದ ಅಣ್ಣಾಸಾಹೇಬ ಜೊಲ್ಲೆ ನಿಪ್ಪಾಣಿಯ ತಮ್ಮದೇ ಸಿಬಿಎಸ್‌ಇ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ಅನೇಕ ಸೋಂಕಿತರು ಈ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

50 ಹಾಸಿಗೆಯ ಸೆಂಟರ್: ಈ ಸೆಂಟರ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು 50 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪ್ರತ್ಯೇಕ ಹಾಸಿಗೆ, ಹೊದಿಕೆ, ಬಟ್ಟೆ, ಸೋಪ್ ಮತ್ತಿತರ ವಸ್ತು ನೀಡಲಾಗುತ್ತದೆ. ಇಲ್ಲಿ ರೋಗಿಗಳಿಗೆ ಮನರಂಜನೆಗೂ ಅವಕಾಶ ಮಾಡಿಕೊಡಲಾಗಿದೆ.

ವೈದ್ಯರಿಗೆ ಪ್ರತ್ಯೇಕ ವಿಭಾಗ: ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರ ಸುರಕ್ಷತೆಗೂ ಇಲ್ಲಿ ಒತ್ತು ನೀಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ. ಡಾ.ಬಲರಾಮ ಜಾಧವ ಹಾಗೂ ಡಾ.ಸಂಗೀತಾ ದೇಶಪಾಂಡೆ ನೇತೃತ್ವದ ಸುಮಾರು 33 ವೈದ್ಯಕೀಯ ಸಿಬ್ಬಂದಿ ಇಲ್ಲಿ ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.