ಜಿಲ್ಲೆ

ಕ್ವಾರಂಟೈನ್‌ನಲ್ಲಿರುವವರಿಗೆ ಢವಢವ; 15 ದಿನವಾದರೂ ಸಿಕ್ಕಿಲ್ಲ ಪರೀಕ್ಷಾ ವರದಿ

ಬೆಂಗಳೂರು ಗ್ರಾಮಾಂತರ: ವಿದೇಶದಿಂದ ಬಂದು ಗ್ರಾಮಾಂತರ ಜಿಲ್ಲೆಯ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಆಗಿರುವ ಭಾರತೀಯರಿಗೆ ಕರೊನಾ ತಪಾಸಣಾ ವರದಿ ಕೈಸೇರದಿರುವುದರಿಂದ ಢವಢವ ಶುರುವಾಗಿದೆ.

ಗಂಟಲು ದ್ರವ ಮಾದರಿ ತೆಗೆದುಕೊಂಡು ಹೋದ ಬಳಿಕ ರಿಪೋರ್ಟ್ ಏನಾಯಿತು ಎಂಬುದೇ ಇಲ್ಲಿನ ಜನರ ಚಿಂತೆಯಾಗಿದೆ. ಒಂದೆರಡು ದಿನಗಳಲ್ಲಿ ತಪಾಸಣಾ ವರದಿ ಬರಲಿದೆ ಎಂದು ಕಾಯುತ್ತಿರುವ ಮಂದಿ ವಾರ ಕಳೆದರೂ ವರದಿ ಕೈ ಸೇರದೆ ರಕ್ತದೊತ್ತಡ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಕ್ವಾರಂಟೈನ್ ಆದ ಮಂದಿಯ ಕರೊನಾ ವರದಿಯನ್ನು ತುರ್ತಾಗಿ ತಲುಪಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಇಲ್ಲಿ ಕೆಲವರ ತಪಾಸಣಾ ವರದಿ 15 ದಿನವಾದರೂ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಯಾರನ್ನು ಕೇಳಿದರೂ ಇನ್ನೇನು ಬರಲಿದೆ ಎಂಬ ಸಿದ್ಧ ಉತ್ತರದಿಂದ ರೋಸಿ ಹೋಗಿರುವ ಮಂದಿ, ಬಿಡುಗಡೆ ಕೊಡಿ ಎಂದು ಅಂಗಲಾಚುತ್ತಿದ್ದಾರೆ.

ಸರ್ಕಾರಕ್ಕೆ ಹೆಚ್ಚು ಹೊರೆ: ಪ್ರಸ್ತುತ ನಾಲ್ಕೂ ತಾಲೂಕುಗಳ 28 ವಸತಿ ಶಾಲೆಗಳಲ್ಲಿ 800ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರತಿದಿನ ಒಬ್ಬರಿಗೆ ಸುಮಾರು 300 ರೂ. ವೆಚ್ಚವನ್ನು ಸರ್ಕಾರ ಭರಿಸುತ್ತಿದೆ. ಅಷ್ಟೂ ಜನಕ್ಕೆ 15 ದಿನದವರೆಗೆ ಮೂಲಸೌಕರ್ಯದೊಂದಿಗೆ ಆಹಾರ ಮತ್ತಿತರ ಖರ್ಚು ಭರಿಸುವುದು ಸರ್ಕಾರಕ್ಕೆ ಹೊರೆಯಾಗಿದೆ.

ಈ ಮಧ್ಯೆ ವರದಿ ಕೈಸೇರುತ್ತಿರುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ವರದಿ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿ 7 ದಿನ ಪೂರೈಸಿದವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. 15 ಅಥವಾ 20 ದಿನದ ಬಳಿಕ ರಿಪೋರ್ಟ್ ತರಿಸಿಕೊಳ್ಳುವ ಆರೋಗ್ಯ ಇಲಾಖೆ ಇದರಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲು ಅವರ ಪ್ರಾಥಮಿಕ ಸಂರ್ಪಕದ ವ್ಯಕ್ತಿಗಳನ್ನು ಮತ್ತೆ ಕ್ವಾರಂಟೈನ್ ಮಾಡಲು ತಿಣುಕಾಡುವ ಪರಿಸ್ಥಿತಿ ಎದುರಿಸುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಬೆಡ್‌ಗಳು ಭರ್ತಿ: ಕರೊನಾ ತಪಾಸಣಾ ವರದಿ ತಡವಾಗುತ್ತಿರುವುದರಿಂದ ಹೊಸಬರನ್ನು ಕ್ವಾರಂಟೈನ್ ಮಾಡಲು ಬೆಡ್‌ಗಳು ಇಲ್ಲದಂತಾಗಿದೆ. ಈಗಾಗಲೇ ದೊಡ್ಡಬಳ್ಳಾಪುರದ ನಾಲ್ಕೂ ವಸತಿ ನಿಲಯಗಳಲ್ಲೂ ಬೆಡ್‌ಗಳು ಭರ್ತಿಯಾಗಿದ್ದು, ಸ್ಥಳೀಯರ ಕ್ವಾರಂಟೈನ್‌ಗೆ ಬೇರೆಡೆ ಜಾಗ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ.

ಲ್ಯಾಬ್ಗಳು ತಾತ್ಕಾಲಿಕ ಸೀಲ್ಡೌನ್: ಕರೊನಾ ತಪಾಸಣೆ ನಡೆಸುವ ಲ್ಯಾಬ್ಗಳಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ಸಿಬ್ಬಂದಿಗೂ ಸೋಂಕು ತಗಲುತ್ತಿದ್ದು, ಸಿಬ್ಬಂದಿ ಕೊರತೆ ಎದುರಾಗುತ್ತಿದೆ. ಜತೆಗೆ ಲ್ಯಾಬ್ಗಳನ್ನು ತಾತ್ಕಾಲಿಕವಾಗಿ ಸೀಲ್ಡೌನ್ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ತಪಾಸಣಾ ವರದಿ ತಡವಾಗುತ್ತಿದೆ ಎಂಬುದು ಅಧಿಕಾರಿಗಳ ಸಮರ್ಥನೆಯಾಗಿದೆ.

ವಸತಿನಿಲಯಗಳಲ್ಲಿ ಕ್ವಾರಂಟೈನ್ ಆಗಿರುವವರ ತಪಾಸಣೆ ತಡವಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ವರದಿ ತಡವಾದಷ್ಟು ಜನರ ಆತಂಕ ಹೆಚ್ಚುತ್ತದೆ. ಜಿಲ್ಲಾ ಆರೋಗ್ಯ ಕೇಂದ್ರ ಕೂಡಲೇ ತಪಾಸಣಾ ವರದಿ ತರಿಸಿಕೊಳ್ಳುವತ್ತ ನಿಗಾ ವಹಿಸಬೇಕು. ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ, ಬೆಂ.ಗ್ರಾಮಾಂತರ