ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಂತ್ರಜ್ಞಾನ ಯುಗದಲ್ಲಿ ನಶಿಸಿಹೋಗುತ್ತಿರುವ ಪಾರಂಪರಿಕ ಕಲೆಗಳನ್ನು ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಾಪಣ್ಣ ತಿಳಿಸಿದರು.
ನಗರ ಹೊರವಲಯದ ನಿಂಬೆಕಾಯಿಪುರದಲ್ಲಿರುವ ಜನಪದರು ರಂಗಮಂದಿರದಲ್ಲಿ ರಂಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ವೃತ್ತಿ ರಂಗಭೂಮಿ ನಮ್ಮ ಹಿರಿಯರು ಹಾಕಿಕೊಟ್ಟಿರುವ ಸಂಸ್ಕೃತಿಯ ಒಂದು ಭಾಗವಾಗಿದೆ. ಇಂದಿಗೂ ಪ್ರಚಲಿತದಲಿದ್ದು, ಸಮಾಜದ ಆಗು-ಹೋಗುಗಳನ್ನು ಜನರಿಗೆ ತನ್ನದೇ ಆದ ಮಾನದಂಡಗಳ ಮೂಲಕ ತಲುಪಿಸುವ ಮಾಧ್ಯಮವಾಗಿದೆ. ರಂಗಕಲೆಯಿಂದ ಸಮಾಜದಲ್ಲಿ ಎಷ್ಟೋ ವಿಚಾರಗಳಲ್ಲಿ ಬದಲಾವಣೆಗಳು ಸಾಧ್ಯವಾಗಿದ್ದು, ಕಲಾ ಪ್ರೇಮಿಗಳಿಗೆ ಪ್ರಬಲ ಮಾಧ್ಯಮವಾಗಿದೆ ಎಂದು ರಂಗ ಸಾಹಿತಿ ಡಾ.ಜಗದೀಶ್ ಹೇಳಿದರು.
ಶ್ರೀ ರಾಮಚಂದ್ರ ಮೂರ್ತಿ ಅವರು ರಾಮಾಯಣದ ರಾವಣನ ಪಾತ್ರವನ್ನು, ಬೋದನಹೊಸಹಳ್ಳಿ ನಾಗೇಶ್, ಶ್ಯಾಮಲಾ ನಾಗೇಶ ಅವರು ಬುಡಗನಾದ ನಾಟಕದ ದೃಶ್ಯಗಳನ್ನು ಪ್ರದರ್ಶಿಸಿದರು.
ಆಶಾ, ಲಿಖಿತಾ ಶಿವಕುಮಾರ್ ಭಾವಗೀತೆಗಳನ್ನು ಹಾಡಿದರು.
ಆರಾಧ್ಯಾ ಬೆಳ್ತೂರು ವಚನ ಹಾಡಿದರು. ವರ್ಣಿತ್ ಸಾಹಸ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು.
ಮುನಿರಾಜು ಹಾಗೂ ಚಲಪತಿ ರಂಗಗೀತೆಗಳನ್ನು ಹಾಡಿದರು.
ಇತ್ತೀಚೆಗೆ ನಿಧನರಾದ ಜನಪದರು ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿ, ಸಾಹಿತಿ, ಉಪನ್ಯಾಸಕ ಜಗದೀಶ್ ಕೆಂಗನಾಳ್ ಹಾಗೂ ಅವರ ಪತ್ನಿ ಗಿರಿಜಾ ಕೆಂಗನಾಳ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಖಂಡರಾದ ದೊಡ್ಡಬನಹಳ್ಳಿ ಸಿದ್ದೇಶ್ವರ, ಎಂ.ಸುರೇಶ್ ಇದ್ದರು.