ರಾಮದುರ್ಗ: ಕಾರ್ಖಾನೆ ಪ್ರಾರಂಭಕ್ಕೆ ಹಣ ನೀಡಿದ ಷೇರುದಾರರಿಗೆ 12 ವರ್ಷಗಳಿಂದ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಾಗುತ್ತಿದೆ. ದೇಶದಲ್ಲಿಯೇ ಕಾರ್ಖಾನೆಯನ್ನು ಸಾಲಮುಕ್ತಗೊಳಿಸಲು ಶ್ರಮಿಸಿದ ಹೆಮ್ಮೆ ನಮ್ಮ ಆಡಳಿತ ಮಂಡಳಿಗಿದೆ ಎಂದು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ಖಾನಪೇಠನಲ್ಲಿರುವ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗುರುವಾರ ಕಾರ್ಖಾನೆಯ ಷೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಖಾನೆ ಲೀಜ್ ಪಡೆದ ಪ್ಯಾರಿ ಕಂಪನಿಯವರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಕಬ್ಬು ಪೂರೈಸಿದ ರೈತರು ಸೇರಿ ಷೇರುದಾರರಿಗೆ ಯಾವುದೆ ತೊಂದರೆ ಉಂಟಾಗದಂತೆ ನೋಡಿಕೊಂಡಿದ್ದೇವೆ. ಅ ವರ್ಗದ ಷೇರುದಾರರಿಗೆ 2,200 ರೂ. ದರದಲ್ಲಿ ಒಂದು ಕ್ವಿಂಟಾಲ್ ಹಾಗೂ ಡ ವರ್ಗದ ಷೇರುದಾರರಿಗೆ 1,100 ರೂ. ದರದಲ್ಲಿ 50ಕೆಜಿ ಸಕ್ಕರೆ ಆ.15ರ ವರೆಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ಕಾರ್ಖಾನೆ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಪ್ರಾರಂಭದಲ್ಲಿ ಹಿರೇರಡ್ಡಿ ಅವರು, ನಂತರ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಕಾರ್ಖಾನೆ ಅಭಿವದ್ಧಿಗೆ ಕೊಡುಗೆ ನೀಡಿದ್ದಾರೆ. ನಾಗ ಪಂಚಮಿ ನಿಮಿತ್ತ ಕಾರ್ಖಾನೆಯಿಂದ ಷೇರುದಾರರಿಗೆ ಸಕ್ಕರೆ ವಿತರಿಸಿ, ಸಿಹಿ ಹಂಚಲಾಗುತ್ತಿದೆ. ಬಿಲ್ ಪಾವತಿ, ಪಾರದರ್ಶಕ ತೂಕ ಸೇರಿ ವಿವಿಧ ವಿಷಯಗಳಲ್ಲಿ ಕಾರ್ಖಾನೆ ಮುಂದಿದೆ ಎಂದರು.
ಸಾನ್ನಿಧ್ಯ ವಹಿಸಿ ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಕಾರ್ಖಾನೆ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಆಡಳಿತ ಮಂಡಳಿ ನಿರ್ದೇಶಕರಾದ ಬಾಳಪ್ಪ ಹಂಜಿ, ಎ.ಸಿ. ಸುರಗ, ಬಿ.ಎಂ. ತುಪ್ಪದ, ಎಂ.ಎಂ. ಆತಾರ, ಸುರೇಶ ಡುಳ್ಳೋಳ್ಳಿ, ಶ್ರೀನಿವಾಸ ಕರದಿನ, ಶಂಕರಗೌಡ ಪಾಟೀಲ, ಚಂದ್ರು ರಜಪೂತ, ಐ.ಎಸ್. ಹರನಟ್ಟಿ, ಬಸವರಾಜ ಸೋಮಗೊಂಡ, ಎನ್.ಎಸ್. ಚಾಕಲಬ್ಬಿ, ತಿಪ್ಪಣ್ಣ ಮುರಗೋಡ, ಎಂಡಿ ಶಾಹೀನ್ ಅಖ್ತರ್, ಪ್ಯಾರಿ ಕಂಪನಿ ಎಂಡಿ ಶಿವಸುಬ್ರಮಣಿಯನ್, ರವಿ ಗೊರಬಾಳ ಇತರರಿದ್ದರು.