ಜಿಲ್ಲೆ

ಬಡವರಿಗೆ ಗಿರಿರಾಜ ಕೋಳಿ ವಿತರಣೆ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ


ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಬಡ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಎಲ್ಲ ವರ್ಗದ ಬಡ ಮಹಿಳೆಯರಿಗೆ ಉಚಿತವಾಗಿ ರಾಜ್ಯಾದ್ಯಂತ 5.40 ಲಕ್ಷ ಗಿರಿರಾಜ ಕೋಳಿಮರಿ ವಿತರಿಸಲು ಸದ್ಯ ಸರ್ಕಾರ ಮುಂದಾಗಿದೆ.

ಜೇನು, ಕುರಿ, ಹಸು ಸಾಕಣೆಗೆ ಪ್ರೋತ್ಸಾಹಿಸುತ್ತಿರುವ ಮಾದರಿಯಲ್ಲಿಯೇ ಕೋಳಿ ಸಾಕಣೆ ಮಾಡುವವರನ್ನೂ ಉತ್ತೇಜಿಸಲು ಗಿರಿರಾಜ ಕೋಳಿಮರಿ ನೀಡಲಾಗುತ್ತಿದೆ. ಅಲ್ಲದೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಗಿರಿರಾಜ ಕೋಳಿ ಮಾರುಕಟ್ಟೆ ವಿಸ್ತರಿಸುವ ಉದ್ದೇಶ ಹೊಂದಿದೆ. ಮೊದಲ ಹಂತವಾಗಿ ಜಿಲ್ಲೆಯಲ್ಲಿ 5 ಸಾವಿರ ಫಲಾನುಭವಿಗಳಿಗೆ ತಲಾ 10 ರಂತೆ 50 ಸಾವಿರ ಕೋಳಿಮರಿ ನೀಡಲು ಯೋಜನೆ ರೂಪಿಸಲಾಗಿದೆ. ಆದರೆ, ಆಯಾ ಜಿಲ್ಲೆಗಳಲ್ಲಿ ಲಾನುಭವಿಗಳ ಆಯ್ಕೆಯಲ್ಲಿ ಹಾಗೂ ಮರಿಗಳ ವಿತರಣೆಯಲ್ಲಿ ವ್ಯತ್ಯಾಸವಾಗಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೊದಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಪಂ ವ್ಯಾಪ್ತಿಯಲ್ಲಿ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳು ಶೇ.25 ಶುಲ್ಕದಲ್ಲಿ ಮರಿ ವಿತರಿಸಲಾಗಿದೆ. ಬೆಳಗಾವಿ ಜಿಪಂ ಸಾಮಾನ್ಯ ಸಭೆಯಲ್ಲಿ 5 ಸಾವಿರ ಫಲಾನುಭವಿಗಳ ಹೆಸರನ್ನು ಸದಸ್ಯರು ಆಯ್ಕೆ ಮಾಡಿದ್ದು, ವಿತರಣೆ ಕಾರ್ಯ ಆರಂಭವಾಗಿಲ್ಲ.

ಕೋಳಿ ಸಾಕಣೆ: 4-5 ವರ್ಷದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 1.20 ಲಕ್ಷಕ್ಕೂ ಅಧಿಕ ಗಿರಿರಾಜ ಕೋಳಿಮರಿಗಳನ್ನು ವಿತರಣೆ ಮಾಡಲಾಗಿತ್ತು. ಅದರಲ್ಲಿ ಕೆಲ ಫಲಾನುಭವಿಗಳು ವರ್ಷದ ಬಳಿಕ ಮಾಂಸಕ್ಕಾಗಿ 1,800 ರಿಂದ 2,500 ರೂ. ದರದಲ್ಲಿ ಕೋಳಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಬ್ಬೊಬ್ಬ ಫಲಾನುಭವಿ ಸದ್ಯ 50 ರಿಂದ 70 ಕೋಳಿಗಳನ್ನು ಸಾಕಣೆ ಮಾಡುತ್ತಿದ್ದಾನೆ.
ಮೊಟ್ಟೆಗೆ ಬೇಡಿಕೆ: ಮಕ್ಕಳಲ್ಲಿ ಪೌಷ್ಟಿಕ ಪ್ರಮಾಣ ಹೆಚ್ಚಿಸುವಲ್ಲಿ ಗಿರಿರಾಜ ಕೋಳಿ ಮೊಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಮೊಟ್ಟೆಗೆ ಬೇಡಿಕೆ ಹೆಚ್ಚಿದೆ. ಈ ತಳಿಯ ಕೋಳಿ ಸಾಕಣೆ ಮಾಡುವವರಿಗೂ ಆರ್ಥಿಕವಾಗಿ ಲಾಭವಾಗುತ್ತಿದೆ. ಹಾಗಾಗಿ ರಾಜ್ಯಾದ್ಯಂತ ಗಿರಿರಾಜ ಕೋಳಿಗಳಿಗೆ ಭಾರಿ ಡಿಮ್ಯಾಂಡ್ ಇದೆ. ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ 2019-20ನೇ ಸಾಲಿನಲ್ಲಿ 5.40 ಲಕ್ಷ ಗಿರಿರಾಜ ಕೋಳಿ ಮರಿಗಳನ್ನು ವಿತರಣೆ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋಳಿಮರಿ ಪಡೆದುಕೊಳ್ಳಲು ಇನ್ನಿಲ್ಲದ ಪೈಪೋಟಿ

ಜಿಪಂನ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಮೂಲಕ ಜಿಲ್ಲೆಯ 90 ಜಿಪಂ ಕ್ಷೇತ್ರಗಳಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿ ಒಬ್ಬ ಫಲಾನುಭವಿಗಳಿಗೆ 10 ಮರಿ ವಿತರಣೆ ಮಾಡುವುದು ನಿಯಮ. ಆದರೆ, ಜಿಪಂನ ಕೆಲ ಸದಸ್ಯರ ಆಕ್ಷೇಪದಿಂದ ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲ ಸೃಷ್ಟಿಸಿದೆ. ಮರಿ ಪಡೆದುಕೊಳ್ಳಲು ಭಾರಿ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಕೆಲವರು ಗಿರಿರಾಜ ಕೋಳಿಗಾಗಿ ಜಿಪಂಗೆ ನೇರವಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಕೆಲವರು ಕೋಳಿಮರಿಗಳನ್ನು ಪಡೆದುಕೊಂಡು ತಮಗೆ ಬೇಕಾದವರಿಗೆ ವಿತರಣೆ ಮಾಡುತ್ತಿದ್ದಾರೆ. ಇದು ಅನರ್ಹರಿಗೆ ಲಾಭವಾಗುತ್ತಿದೆ ಎಂದು ಜಿಪಂ ಸದಸ್ಯರು ದೂರಿದ್ದಾರೆ.

ಬಡ ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆ, ಕೋಳಿ ಸಾಕಣೆಗೆ ಉತ್ತೇಜನ ನೀಡಲು ಉಚಿತವಾಗಿ ಗಿರಿರಾಜ ಕೋಳಿಮರಿಳನ್ನು ಸರ್ಕಾರ ವಿತರಿಸುತ್ತಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 5 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲಿ ವಿತರಣೆ ಮಾಡಲಾಗುವುದು. ಸಾರಿಗೆ ಸೇರಿ ಇನ್ನಿತರ ವೆಚ್ಚಕ್ಕೆ ಸರ್ಕಾರವು ಒಂದು ಕೋಳಿಮರಿಗೆ 100 ರೂ. ಖರ್ಚು ಮಾಡುತ್ತಿದೆ.| ಡಾ.ಎ.ಕೆ.ಚಂದ್ರಶೇಖರ ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ