ವಿಜಯಪುರದ ಜಿಪಂ ಸಭಾಂಗಣದಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಶಿಕ್ಷಣ ಅದಾಲತ್ ನಡೆಸಿದರು. ರಾಮಣ್ಣ ಅಥಣಿ, ಎನ್.ಎಚ್.ನಾಗೂರ, ಟಿ.ಎಸ್. ಆಲಗೂರ ಮತ್ತಿತರರಿದ್ದಾರೆ.  
ಜಿಲ್ಲೆ

ಪ್ರಪ್ರಥಮ ಬಾರಿಗೆ ಶಿಕ್ಷಣ ಅದಾಲತ್ ಆಯೋಜನೆ, ಶಿಕ್ಷಕರ ಕುಂದು ಕೊರತೆ ನಿವಾರಣೆ

ವಿಜಯಪುರ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಶಿಕ್ಷಕರ ಕುಂದು ಕೊರತೆ ನಿವಾರಣೆ ಅತ್ಯವಶ್ಯಕವಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶಿಕ್ಷಕರ ಕುಂದು ಕೊರತೆಗಳನ್ನು ಬಗೆಹರಿಸಲು ಶುಕ್ರವಾರ ಹಮ್ಮಿಕೊಂಡ ಶಿಕ್ಷಣ ಅದಾಲತ್ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿಕೊಂಡಿರುವ ಶಿಕ್ಷಣ ಇಲಾಖೆ ಕಾರ್ಯ ಅತಿ ಮುಖ್ಯ ಹಾಗೂ ಮಹತ್ವದ್ದಾಗಿದೆ. ಶಿಕ್ಷಕರ ಹಲವಾರು ಕುಂದು ಕೊರತೆಗಳ ನಿವಾರಣೆಗೆ ಪ್ರತಿ ದಿನ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಕರ ಕುಂದು ಕೊರತೆಗಳನ್ನು ನಿವಾರಿಸಲು ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿಕ್ಷಣ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶಿಕ್ಷಕರು ಶಾಲಾ ಬೋಧನೆ ಬಿಟ್ಟು ಕಚೇರಿ ಕಚೇರಿ ಅಲೆದಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಅಸಾಧ್ಯ. ಆದ್ದರಿಂದ ಇಂದಿನ ಮಕ್ಕಳು ನಮ್ಮ ದೇಶದ ಮುಂದಿನ ಸತಪ್ರಜೆಯನ್ನಾಗಿ ಮಾಡಲು ಶಿಕ್ಷಕರ ಕುಂದು ಕೊರತೆಗಳನ್ನು ನಿವಾರಿಸಲು ಏಕಗವಾಕ್ಷಿ ಪದ್ಧತಿಯಲ್ಲಿ ಶಿಕ್ಷಣ ಅದಾಲತ್ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿಲಾಗಿದೆ. ಇದರ ನಿವಾರಣೆಗಾಗಿ ಇಂದು ಈ ಶಿಕ್ಷಣ ಅದಾಲತ್ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಶಿಕ್ಷಕರು ಈ ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳಿಗೆ ಪರಿಹಾರ ಕಂಡುಕೊಂಡಿದ್ದು ನಿಜಕ್ಕೂ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಬರುವ ಎಲ್ಲ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿ ಹಿತದೃಷ್ಠಿಯಿಂದ ಎಲ್ಲ ಇಲಾಖೆಗಳ ಕುಂದು ಕೊರತೆ ಅದಾಲತ್ ಹಮ್ಮಿಕೊಳ್ಳಲಾಗುವುದು ಎಂದರು.

ಇಂಡಿ ಮತ್ತು ವಿಜಯಪುರ ಗ್ರಾಮೀಣ ಭಾಗದ ನೂರಾರು ಶಿಕ್ಷಕರು ಭಾಗವಹಿಸಿ ಗಳಿಕೆ ರಜೆ ನಗದೀಕರಣ, ಹಬ್ಬದ ಮುಂಗಡ, ವೇತನ ಬಡ್ತಿ, ಕಾಲಮಿತಿ ಬಡ್ತಿ, ಸ್ಥಗಿತ ವೇತನ ಬಡ್ತಿ, ಸೇವಾ ಪುಸ್ತಕ ಅಪಡೇಟ್ ಮಾಡುವುದು, ಶಿಸ್ತು ಕ್ರಮ, ಪಿಂಚಣಿ, ಜಿಪಿಎಫ್ ಮತ್ತು ವೈದ್ಯಕೀಯ ಬಿಲ್ಲುಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಅದಾಲತ್ ನಲ್ಲಿ ಆಲಿಸಿ, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಯಿತು.

ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಎನ್.ಎಚ್.ನಾಗೂರ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ಪ್ರಮೋದಿನಿ ಬಳೋಲಮಟ್ಟಿ, ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಎ. ಗುಳೆದಗುಡ್ಡ, ಟಿ.ಎಚ್. ಕೊಲ್ಹಾರ, ರಾಜಶೇಖರ ದೈವಾಡಿ ಮತ್ತಿತರರಿದ್ದರು.