ವಿಜಯಪುರದ ಐಶ್ವರ್ಯ ನಗರದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದ ಕಮಿಟಿ ಅಧ್ಯಕ್ಷ ವಿವೇಕ ಹುಂಡೆಕರ ಸುದ್ದಿಗೋಷ್ಠಿ ನಡೆಸಿದರು. ನಾನಾಗೌಡ ಬಿರಾದಾರ, ಬಸವರಾಜ ಕೋರಿ, ಬಸವರಾಜ್​ ಇಳಿಗೇರ ಮತ್ತಿತರರಿದ್ದಾರೆ. 
ಜಿಲ್ಲೆ

ಪ್ರಪ್ರಥಮ ಬಾರಿಗೆ ಜಂಬು ಸವಾರಿ ಆಯೋಜನೆ

ಗಿರೀಶ ಸಗರ

ವಿಜಯಪುರ: ನಗರದ ಐಶ್ವರ್ಯ ನಗರದಲ್ಲಿ ದಸರಾ ಹಿನ್ನೆಲೆ ಪ್ರಪ್ರಥಮ ಬಾರಿಗೆ ಜಂಬು ಸವಾರಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಚಾಮುಂಡೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ವಿವೇಕ ಹುಂಡೆಕರ ಹೇಳಿದರು.

ಅ. 3 ರಂದು ಐಶ್ವರ್ಯ ನಗರದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಮೊಟ್ಟ ಮೊದಲ ಬಾರಿಗೆ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದ್ದು, ತನ್ನಿಮಿತ್ತ ಜಂಬು ಸವಾರಿ ಮೆರವಣಿಗೆ ಕೂಡ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಂದು ಬೆಳಗ್ಗೆ 8.30 ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ಜಂಬುಸವಾರಿಯ ಭವ್ಯ ಮೆರವಣಿಗೆಯು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆಶ್ರಮ ರಸ್ತೆ, ಐಶ್ವರ್ಯ ನಗರದ ಮುಖ್ಯ ರಸ್ತೆಗಳ ಮೂಲಕ ಸಾಗಲಿದೆ. ಕುಂಭ ಮೇಳದೊಂದಿಗೆ ಒಂಟೆ, ಕುದುರೆ, ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ಕೊಂಬು&ಕಹಳೆಯ ನಿನಾದದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.

ಕಾರ್ಯದರ್ಶಿ ನಾನಾಗೌಡ ಬಿರಾದಾರ ಮಾತನಾಡಿ, ಒಂಬತ್ತು ದಿನ ನಿರಂತರ ಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಅ.4 ರಂದು ನಿತ್ಯ ಪೂಜೆ ನಡೆಯಲಿ. ದಾಂಡಿಯಾ ಕಾರ್ಯಕ್ರಮ ನೆರವೇರಲಿದೆ. 9 ದಿನಗಳ ಕಾಲ ಚಾಮುಂಡೇಶ್ವರಿ ಪುರಾಣ ಪ್ರವಚನ ನಡೆಯಲಿದ್ದು 9 ನೇ ದಿನ 5 ಬಡಾವಣೆಯ ಜನ ಸೇರಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಮೈಸೂರಿನಲ್ಲಿ ಸರ್ಕಾರವೇ ಜಂಬುಸವಾರಿ ನಡೆಸುತ್ತದೆ.

ಆದರೆ ಇಲ್ಲಿ ಸುತ್ತಲೂ 20 ಬಡಾವಣೆಯ ಜನ ಸೇರಿಕೊಂಡು ತನು ಮನ ಧನದಿಂದ ಕೈ ಜೋಡಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಂಬುಸವಾರಿಗೆ ಆನೆ ತರಲು ಸರ್ಕಾರದ ಅನುಮತಿ ಪಡೆದುಕೊಂಡಿದ್ದೇವೆ. ಹಾಗಾಗಿ ವಿಜಯಪುರದ ಎಲ್ಲ ಬಡಾವಣೆ ಜನ ಈ ವಿಶೇಷ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಚಾಮುಂಡೇಶ್ವರಿ ದಸರಾ ಉತ್ಸವ &2024 ರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬಸವರಾಜ ಕೋರಿ ಮಾತನಾಡಿ, ಮೈಸೂರು ಮಾದರಿಯಲ್ಲಿ ವಿಜಯಪುರದಲ್ಲಿ ಇದೇ ಪ್ರಥಮ ಬಾರಿಗೆ ಜಂಬುಸವಾರಿ ಮೆರವಣಿಗೆ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಬಸವರಾಜ್​ ಇಳಿಗೇರ, ರಾಜುಗೌಡ ಪಾಟೀಲ, ಭೀಮನಗೌಡ ಬಿರಾದಾರ, ಅಶೋಕ ತಿಮಶೆಟ್ಟಿ, ಬಸವರಾಜ ಕೋರಿ, ಸದಾಶಿವ ಚಿಕರೆಡ್ಡಿ, ಮೃತ್ಯುಂಜಯ ಶಿರೂರ ಮತ್ತಿತರರಿದ್ದರು.