ಜಗಳೂರು: ಈಗಾಗಲೇ ರಾಜ್ಯ ಸರ್ಕಾರದ ಬರಪೀಡಿತ ಪಟ್ಟಿಯಲ್ಲಿ ಜಗಳೂರು ತಾಲೂಕನ್ನು ಮಧ್ಯಮ ಬರಪೀಡಿತಕ್ಕೆ ಸೇರಿಸಿದೆ. ಆದರೆ, ಸಂಪೂರ್ಣ ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಲು ಅಧಿಕಾರಿಗಳು ಬೆಳೆ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ತಿಳಿಸಿದರು.
ತಾಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಅಧಿಕಾರಿಗಳ ತಂಡದೊಂದಿಗೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು ಮಾತನಾಡಿದರು.
ರಾಜ್ಯದಲ್ಲಿ ಅತ್ಯಂತ ಬರಪೀಡಿತ ತಾಲೂಕು ಜಗಳೂರು. ಆದ್ದರಿಂದ ತಾಲೂಕನ್ನು ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿಸಲು ಅಧಿಕಾರಿಗಳ ಜತೆ ಖುದ್ದು ಬೆಳೆ ಪರಿಶೀಲನೆ ಮಾಡಿ ವರದಿ ಸರ್ಕಾರಕ್ಕೆ ಕಳಿಸಲಾಗುವುದು ಎಂದರು.
ಬಿತ್ತನೆಯಾದ ಬೆಳೆಗಳು ಶೇ.70ರಷ್ಟು ಮಳೆಯ ಕೊರತೆಯಿಂದ ಒಣಗುತ್ತಿದ್ದು, ಬಹುತೇಕ ಬೆಳೆ ಕೈಗೆ ಸಿಗುವುದು ಕಷ್ಟ ಎಂದರು.
ವಾಡಿಕೆಯಂತೆ ಆಗಸ್ಟ್‌ನಲ್ಲಿ 56 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಶೇ.16ರಷ್ಟು ಮಾತ್ರ ಮಳೆ ಬಂದಿದೆ. ಇದರಿಂದ ಬೆಳೆಗಳು ಬಾಡುತ್ತಿವೆ. ಜಿಲ್ಲೆಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ತಾಲೂಕಿನ ವಾಸ್ತವ ಪರಿಸ್ಥಿತಿ ಬಗ್ಗೆ ವರದಿ ನೀಡಿ ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಲು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ಮಾತನಾಡಿ, ತಾಲೂಕಿನಲ್ಲಿ 51 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಮೆಕ್ಕೆಜೋಳ, ರಾಗಿ, ತೊಗರಿ, ಶೇಂಗಾ ಬೆಳೆಗಳು ಶೇ.80ರಿಂದ 90ರಷ್ಟು ಹಾಳಾಗಿದೆ. ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಮಾಡಬೇಕಿದ್ದು, ತಾಲೂಕಿನಾದ್ಯಂತ ಸೋಮವಾರದಿಂದ 19 ಹಳ್ಳಿಗಳಲ್ಲಿ ಬೆಳೆ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಕೃಷಿ ಇಲಾಖೆ ಎಒ ಜೀವಿತಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ, ತೋಟಗಾರಿಕೆ ಇಲಾಖೆ ಎಎಚ್‌ಒಗಳಾದ ಪ್ರಸನ್ನ ವೆಂಕಟೇಶ್ವರ ನಾಯ್ಕ, ಸುನೀಲ್, ಆರ್‌ಐ ಧನಂಜಯ, ಕೀರ್ತಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡ ಗೌಸ್ ಅಹಮದ್ ಮತ್ತಿತರರಿದ್ದರು.