ಜಗದೀಶ ಹೊಂಬಳಿ ಬೆಳಗಾವಿ
ಕಿತ್ತೂರು ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್‌ನಲ್ಲಿ ‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ರಚನೆ ಮಾಡಲಾಗುವುದು ಎಂದು ೋಷಣೆ ಮಾಡಿದ್ದರು. ಆದರೆ, ಇದರಿಂದ ಈ ಭಾಗದ ಜನರು ಸಮಗ್ರ ಅಭಿವೃದ್ಧಿ ಕನಸು ಕಂಡಿದ್ದರು ಕೂಡ. ೋಷಣೆ ಆಗಿ ಮೂರು ವರ್ಷ ಕಳೆದರೂ ಮಂಡಳಿ ರಚನೆ ಆಗದೇ ಇರುವುದು ಇಲ್ಲಿಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡಳಿ ರಚನೆಗೆ ಭರವಸೆ ನೀಡಲಾಗಿತ್ತು. ನಂತರದಲ್ಲಿ ಸರ್ಕಾರ ಬದಲಾಯಿತು. ಹೀಗಾಗಿ ಈವರೆಗೂ ಇದಕ್ಕೆ ಹಣ ಮೀಸಲಿಟ್ಟಿಲ್ಲ. ಮಂಡಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡದಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿವೇಶನದಲ್ಲಾದರೂ ಘೋಷಣೆ ಮಾಡಿ, ಮಂಡಳಿ ರಚನೆಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎನ್ನುವುದು ಈ ಭಾಗದ ಜನಾಗ್ರಹವಾಗಿದೆ.
ಮಂಡಳಿ ರಚನೆಗೆ ಆಗ್ರಹ: ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ, ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ಈ ಭಾಗದ ಬಹಳಷ್ಟು ತಾಲೂಕುಗಳು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇವುಗಳಿಗೆ ಬಲ ತುಂಬಬೇಕಿದೆ. ಕೆಲವು ತಾಲೂಕುಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಯುವುದಕ್ಕೆ ಸೂಕ್ತ ಕೊಠಡಿಗಳಿಲ್ಲ. ಕೆಲ ತಾಲೂಕುಗಳ ಹಳ್ಳಿಗಳಲ್ಲಿ ಶಾಲಾ ಕಟ್ಟಡಗಳು ಬಿದ್ದಿವೆ. ಆರ್ಥಿಕವಾಗಿ, ಶೈಕ್ಷಣಿಕ ಎಲ್ಲ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಕಿತ್ತೂರು ಕರ್ನಾಟಕ ಮಂಡಳಿ ರಚಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.
ತಾಲೂಕುಗಳ ಅಭಿವೃದ್ಧಿಯೂ ಮಾನದಂಡವಾಗಲಿ: ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರೀತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಜತೆಗೆ ಅನುದಾನ ಬರುತ್ತದೆ. ಜಿಲ್ಲಾ ಕೇಂದ್ರಿತ ಅಭಿವೃದ್ಧಿ ಮಾನದಂಡ ಬಿಟ್ಟು ತಾಲೂಕು ಕೇಂದ್ರಿತ ಅಭಿವೃದ್ಧಿ, ಅನುದಾನ ಮಂಜೂರಾದರೆ ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಹೊಂದಲು ಸಾಧ್ಯ. ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗ, ರಾಯಬಾಗ ಅತ್ಯಂತ ಹಿಂದುಳಿದಿವೆ. ಸವದತ್ತಿಯೂ ಈಗ ಅಭಿವೃದ್ಧಿ ಹೊಂದುತ್ತಿದೆ. ಹೀಗೆ ಕಿತ್ತೂರು ಕರ್ನಾಟಕ ಭಾಗದ ಏಳು ಜಿಲ್ಲೆಗಳ ವ್ಯಾಪ್ತಿಯ ಪ್ರತಿ ಜಿಲ್ಲೆಯಲ್ಲಿ 2-3 ತಾಲೂಕುಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಬಲಾಢ್ಯ ರಾಜಕಾರಣಿಗಳು ಇರುವ ತಾಲೂಕುಗಳಷ್ಟೇ ಅಭಿವೃದ್ಧಿ ಸಾಧಿಸಿವೆ. ಒಂದು ವೇಳೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಆದರೆ ಎಲ್ಲ ತಾಲೂಕುಗಳಿಗೂ ಅಭಿವೃದ್ಧಿ ಸ್ಪರ್ಶ ದೊರೆಯಲಿದೆ ಎಂಬ ಅಭಿಪ್ರಾಯ ಜನರದ್ದು.
ಈ ಭಾಗದ ಜನರ ಹಕ್ಕೊತ್ತಾಯ 1 ‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ಕಾಲಮಿತಿಯಲ್ಲೇ ರಚಿಸಬೇಕು. 2 ಈ ಭಾಗದ ಹಿಂದುಳಿದ ತಾಲೂಕುಗಳನ್ನು ಗುರುತಿಸುವುದಕ್ಕೆ ಕಮಿಟಿ ರಚಿಸಬೇಕು. 3 ತಾಲೂಕು ಕೇಂದ್ರಿತ ಅಭಿವೃದ್ಧಿಗೂ ಒತ್ತು ನೀಡಬೇಕು. 4 ಅಭಿವೃದ್ಧಿ ಆಸಕ್ತಿ ಇರುವವರನ್ನು ಮಂಡಳಿಗೆ ನೇಮಿಸಬೇಕು.
ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಘೋಷಣೆಯಾಗಿದೆ. ಕಾರ್ಯರೂಪಕ್ಕೆ ಬಂದಿಲ್ಲ. ಏಳು ಜಿಲ್ಲೆಗಳ ವ್ಯಾಪ್ತಿಯ ತಾಲೂಕುಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸುವ ಚಿಂತನೆ ಇತ್ತು. ಈವರೆಗೂ ಮಂಡಳಿ ರಚಿಸಿಲ್ಲ, ಹಣ ಮೀಸಲಿಟ್ಟಿಲ್ಲ. ಸರ್ಕಾರ ಈ ಸಂದರ್ಭದಲ್ಲಾದರೂ ಗಮನ ಹರಿಸಲಿ. ಹಿಂದುಳಿದ ತಾಲೂಕುಗಳನ್ನು ಗುರುತಿಸುವುದಕ್ಕೆ ಕಮಿಟಿ ರಚಿಸಲಿ. | ಅಶೋಕ ಚಂದರಗಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಬೆಳಗಾವಿ